ತಿರುವನಂತಪುರಂ: ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ನಿರ್ಧಾರ ಮತ್ತು ದಿನಾಂಕವನ್ನು ಶಿಕ್ಷಣ ಇಲಾಖೆಗೆ ತಿಳಿಯದೆ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಗ್ಯ ಇಲಾಖೆಯೊಂದಿಗೆ ಮಾತ್ರ ಚರ್ಚಿಸಿ ಈ ನಿರ್ಧಾರ ಪ್ರಕಟಿಸಿದ್ದರು.
ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದು ಸ್ವತಃ ಶಿಕ್ಷಣ ಇಲಾಖೆಯ ಸಚಿವರು ಪ್ರತಿಕ್ರಿಯಿಸಿ ಗೊಂದಲ ಮೂಡಿಸಿದ್ದಾರೆ. ಶಿಕ್ಷಣ ಇಲಾಖೆಯ ಅರಿವಿಲ್ಲದೆ ಈ ನಡೆ ವಿವಾದಾಸ್ಪದವಾಗಿದೆ.
ಶಿಕ್ಷಣ ಸಚಿವರನ್ನಾಗಲಿ ಅಥವಾ ಇಲಾಖೆಯ ಉನ್ನತ ಅಧಿಕಾರಿಗಳನ್ನಾಗಲಿ ಕೊರೊನಾ ಉನ್ನತ ಮಟ್ಟದ ಸಭೆಗೆ ಆಹ್ವಾನಿಸಿರಲಿಲ್ಲ. ಬೆಳಿಗ್ಗೆ ಪ್ಲಸ್ ಒನ್ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದ ಸಭೆ ಕರೆದಾಗಲೂ ಶಾಲೆ ತೆರೆಯುವ ಬಗ್ಗೆ ಚರ್ಚಿಸಿಲ್ಲ.
ಆದ್ದರಿಂದ, ನವೆಂಬರ್ 1 ರಿಂದ ಶಾಲೆಯನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿಯವರ ಪತ್ರಿಕಾ ಪ್ರಕಟಣೆಯ ಬಳಿಕ ಶಿಕ್ಷಣ ಸಚಿವರು ಈ ಬಗ್ಗೆ ಮಾಹಿತಿ ನೀಡಿ ಗೊಂದಲದ ಎಳೆಯನ್ನು ತೆರೆದಿಟ್ಟರು. ಮೊದಲು ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಶಿಕ್ಷಣ ಇಲಾಖೆಗೆ ಕಳವಳಗಳಿವೆ ಎಂದು ಶಿಕ್ಷಣ ಸಚಿವರು ತಿಳಿಸಿರುವರು.
ನವೆಂಬರ್ 15 ರಿಂದ ಎಲ್ಲಾ ತರಗತಿಗಳನ್ನು ಆರಂಭಿಸಲು ಮತ್ತು ಹದಿನೈದು ದಿನಗಳ ಮುಂಚಿತವಾಗಿ ಸಿದ್ಧತೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ದೇಶನ ನೀಡಿದ್ದರು.