ಲಖನೌ: ಕೃಷಿ ಕಾಯ್ದೆ ಜಾರಿ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ನಡುವಿನ ಹಗ್ಗ-ಜಗ್ಗಾಟ ಮುಂದುವರೆದಿರುವಂತೆಯೇ ಇತ್ತ ಬಿಜೆಪಿ ಸಂಸದ ವರುಣ್ ಗಾಂಧಿ ರೈತರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರನ್ನು ನಮ್ಮ ಬಂಧು ಬಾಂಧವರು ಎಂದು ಕರೆದಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಸರ್ಕಾರ ರೈತರೊಂದಿಗೆ ಮಾತುಕತೆ ಪುನರಾರಂಭಿಸಬೇಕು ಮತ್ತು ಅವರೊಂದಿಗೆ ಒಮ್ಮತ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾವು(ಎಸ್‌ಕೆಎಂ) ಮಹಾಪಂಚಾಯತ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದರು. ಇದೇ ವಿಚಾರವಾಗಿ ವರುಣ್ ಗಾಂಧಿ ಟ್ವೀಟ್ ಮಾಡಿದ್ದು, 'ಮುಜಾಫರ್‌ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ನಮ್ಮ ಬಂಧು ಬಾಂಧವರು. ನಾವು ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಅವರ ದೃಷ್ಟಿಕೋನಗಳನ್ನು ಅರ್ಥೈಸಿಕೊಂಡು ಒಮ್ಮತ ಅಭಿಪ್ರಾಯಕ್ಕೆ ತಲುಪಬೇಕು' ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಇದೇ ಟ್ವೀಟ್ ನಲ್ಲಿ ರೈತರ ಪ್ರತಿಭಟನೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಇನ್ನು ಕೃಷಿ ಕಾಯ್ದೆ ವಿಚಾರವಾಗಿ ರೈತರ ಪ್ರತಿಭಟನೆಯಿಂದಾಗಿ ಈ ಹಿಂದೆ ಮೋದಿ ಸರ್ಕಾರ ಸಾಕಷ್ಟು ಮುಜುಗರಕ್ಕೊಳಗಾಗಿತ್ತು. ಅಲ್ಲದೆ ರೈತರ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಕೂಡ ಗ್ರಾಸವಾಗಿತ್ತು.