ಪುಣೆ: ಕಾರು ತಯಾರಕ ಕಂಪನಿಗಳು ಮುಂದೆ ತಾವು ತಯಾರಿಸುವ ವಾಹನಗಳಲ್ಲಿ 'ಫ್ಲೆಕ್ಸ್-ಇಂಧನ ಎಂಜಿನ್'ಗಳನ್ನು (ಎಥೆನಾಲ್ ಮತ್ತು ಪೆಟ್ರೊಲ್ ಮಿಶ್ರಣವಾಗಿಸಿ ಬಳಸುವ ಎಂಜಿನ್) ಕಡ್ಡಾಯವಾಗಿ ಅಳವಡಿಸುವಂತೆ ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ಆದೇಶ ಹೊರಡಿಸುವುದಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಪುಣೆಯಲ್ಲಿ ಶುಕ್ರವಾರ ಮೇಲ್ಸೇತುವೆ ನಿರ್ಮಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಪೆಟ್ರೊಲ್ ಮತ್ತು ಡೀಸಲ್ ಬಳಕೆಯನ್ನು ನಿಲ್ಲಿಸಿ, ದೇಶೀಯವಾಗಿ ಉತ್ಪಾದಿಸುತ್ತಿರುವ ಎಥೆನಾಲ್ ಬಳಕೆಗೆ ಉತ್ತೇಜನ ನೀಡುವುದಕ್ಕಾಗಿ ಈ 'ಫ್ಲೆಕ್ಸ್ -ಇಂಧನ ಎಂಜಿನ್' ಅಳವಡಿಕೆಗೆ ಆದೇಶಿಸಲಾಗುತ್ತಿದೆ ಎಂದು ಅವರು ಹೇಳಿದರು.
ಫ್ಲೆಕ್ಸ್ ಇಂಧನ ಎಂದರೆ, ಗ್ಯಾಸೊಲಿನ್ ಮತ್ತು ಮೆಥನಾಲ್ ಅಥವಾ ಎಥೆನಾಲ್ ಸಂಯೋಜನೆಯಿಂದ ತಯಾರಿಸಿದ ಪರ್ಯಾಯ ಇಂಧನವಾಗಿದೆ.
'ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಈ ಆದೇಶ ಹೊರಡಿಸಲಿದ್ದೇನೆ. ಇದರಲ್ಲಿ ಕಾರು ತಯಾರಿಸುವ ಬಿಎಂಡಬ್ಲ್ಯು, ಮರ್ಸಿಡಿಸ್‌ನಿಂದ ಹಿಡಿದು ಟಾಟಾ ಮತ್ತು ಮಹೀಂದ್ರಾ ಕಂಪನಿಗಳವರೆಗೆ ಎಲ್ಲ ವಾಹನಗಳಿಗೆ ಫ್ಲೆಕ್ಸ್ ಎಂಜಿನ್‌ಗಳನ್ನು ಅಳವಡಿಸುವಂತೆ ಕೇಳಲಾಗುತ್ತದೆ' ಎಂದು ಅವರು ಹೇಳಿದರು.
ಬಜಾಜ್ ಮತ್ತು ಟಿವಿಎಸ್ ಕಂಪನಿಗಳಿಗೆ ತಮ್ಮ ವಾಹನಗಳಲ್ಲಿ ಫ್ಲೆಕ್ಸ್ ಇಂಜಿನ್ ಅಳವಡಿಸುವಂತೆ ಹೇಳಿದ್ದೇನೆ. ತಮ್ಮ ಕಂಪನಿಯ ವಾಹನಗಳಿಗೆ ಫ್ಲೆಕ್ಸ್ ಎಂಜಿನ್ ಅಳವಡಿಸುವವರೆಗೂ ನನ್ನನ್ನು ಸಂಪರ್ಕಿಸಬೇಡಿ ಎಂದು ಕಂಪನಿಯವರಿಗೆ ಸೂಚಿಸಿದ್ದೇನೆ ಎಂದರು.
'ನನ್ನ ಜೀವಿತಾವಧಿಯಲ್ಲಿ ದೇಶದಲ್ಲಿ ಪೆಟ್ರೊಲ್ ಮತ್ತು ಡೀಸಲ್ ಬಳಕೆಯನ್ನು ನಿಲ್ಲಿಸಬೇಕೆಂಬುದು ಬಯಸುತ್ತೇನೆ. ರೈತರು ಇದಕ್ಕೆ ಪರ್ಯಾಯವಾಗಿ ಎಥೆನಾಲ್ ರೂಪದಲ್ಲಿ ಇಂಧನವನ್ನು ತಯಾರಿಸಿ ಕೊಡುವಂತಾಗಬೇಕು' ಎಂದು ಗಡ್ಕರಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಎಥೆನಾಲ್ ಪಂಪ್‌ಗಳನ್ನು ಪುಣೆಯಲ್ಲಿ ಉದ್ಘಾಟಿಸಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಭಾಗದ ಜಿಲ್ಲೆಗಳಲ್ಲಿ ಇನ್ನಷ್ಟು ಎಥೆನಾಲ್ ಪಂಪ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ವೇದಿಕೆಯಲ್ಲಿದ್ದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಕೇಳಿದರು. ಎಥೆನಾಲ್ ಪಂಪ್ ಆರಂಭಿಸುವುದರಿಂದ, ಒಂದು ಕಡೆ ಸಕ್ಕರೆ ಕಾರ್ಖಾನೆಯವರಿಗೆ ಇನ್ನೊಂದು ಕಡೆ ರೈತರಿಗೆ ಸಹಾಯವಾಗುತ್ತದೆ ಎಂದು ಗಡ್ಕರಿ ಹೇಳಿದರು.