ನವದೆಹಲಿ: ದೇಶದಲ್ಲಿ ಈ ವಾರದ ಮಧ್ಯದಿಂದ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ ಏಕಾಏಕಿ ಏರಿಕೆ ಕಂಡುಬಂದಿದೆ. ಆದರೆ ಕೊರೊನಾ ಪ್ರಕರಣಗಳು ಅಧಿಕ ಮಟ್ಟದಲ್ಲಿ ದಾಖಲಾಗುತ್ತಿದ್ದ ರಾಜ್ಯಗಳಲ್ಲಿ ಏಳು ದಿನಗಳ ಸರಾಸರಿ ಪ್ರಕರಣಗಳನ್ನು ಗಮನಿಸಿದರೆ ಕೊರೊನಾ ಪ್ರಕರಣಗಳು ಕೊಂಚ ತಗ್ಗಿರುವುದು ಕಂಡುಬಂದಿದೆ.
ಇಡೀ ದೇಶದಲ್ಲಿ ಕೇರಳ ರಾಜ್ಯವೊಂದರಿಂದಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇದೇ ಮಂಗಳವಾರ ಕೇರಳದಲ್ಲಿ 25,772 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬುಧವಾರ ಈ ಸಂಖ್ಯೆ 30,196ಕ್ಕೆ ಏರಿಕೆಯಾಗಿತ್ತು. ಇದನ್ನೇ ಹಿಂದಿನ ಏಳು ದಿನಗಳಿಗೆ ಹೋಲಿಕೆ ಮಾಡಿದರೆ, ಸರಾಸರಿ ಪ್ರಕರಣಗಳಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಕಳೆದ ಮಂಗಳವಾರ 28,009 ಇದ್ದು, ಬುಧವಾರ 27,637 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದವು.
ವಾರದ ಸರಾಸರಿ ಅಂದಾಜಿನಲ್ಲಿ ಒಟ್ಟಾರೆ ಕೊರೊನಾ ಪ್ರಕರಣಗಳು ಇಳಿಕೆಯಾಗಿರುವುದು ಕಂಡುಬಂದಿದೆ.
ಬುಧವಾರ ಕೇರಳದಲ್ಲಿ 30,196 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಬುಧವಾರ 4174 ಪ್ರಕರಣಗಳು ದಾಖಲಾಗಿದ್ದವು. ತಮಿಳುನಾಡಿನಲ್ಲಿ 1587, ಆಂಧ್ರಪ್ರದೇಶದಲ್ಲಿ 1361, ಮಿಝೋರಾಂನಲ್ಲಿ 1214 ಹಾಗೂ ಕರ್ನಾಟಕದಲ್ಲಿ 1102 ಪ್ರಕರಣಗಳು ದಾಖಲಾಗಿವೆ.
ಭಾರತದಲ್ಲಿ ಬುಧವಾರಕ್ಕೆ ಹೋಲಿಸಿದರೆ ಗುರುವಾರ 14% ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿವೆ. ಗುರುವಾರ 43,263 ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಂದು ದಿನದಲ್ಲಿ 338 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗೂ ಒಟ್ಟು 3,31,39,981 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಮೂರು ಲಕ್ಷ ಮೀರಿದೆ. 3,93,614 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು 1.19% ಇದೆ. ಚೇತರಿಕೆ ಪ್ರಮಾಣ 97.48% ದಾಖಲಾಗಿದೆ.
ಬುಧವಾರ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಅಧಿಕ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಕ್ರಮೇಣ ಸೋಂಕು ಹೆಚ್ಚಳವಾಗುವ ಲಕ್ಷಣಗಳು ಕಂಡುಬರುತ್ತಿವೆ.
ಈ ಸೋಂಕು ನಿಯಂತ್ರಣ ದೃಷ್ಟಿಯಿಂದ ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದ್ದು, ಇದುವರೆಗೂ 71 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೂರನೇ ಅಲೆ ಎಚ್ಚರಿಕೆ?
ದೇಶದಲ್ಲಿ ಹೀಗೆ ಕೊರೊನಾ ಪ್ರಕರಣಗಳ ಏರಿಕೆಯಾಗುತ್ತಿರುವುದು ಮೂರನೇ ಅಲೆ ಉಪಸ್ಥಿತಿಯನ್ನು ಸೂಚಿಸುತ್ತಿರಬಹುದೇ ಎಂಬ ಅನುಮಾನಗಳು ತಜ್ಞರನ್ನು ಕಾಡುತ್ತಿವೆ. ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಮೂರನೇ ಅಲೆಯ ಪ್ರಭಾವವೇ ಎಂಬ ಆತಂಕದ ನಡುವೆ, ಎಲ್ಲಾ ರಾಜ್ಯಗಳೂ ಕಟ್ಟೆಚ್ಚರಿಕೆ ವಹಿಸಬೇಕಿದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಎಚ್ಚರಿಕೆ ನೀಡಿರುವುದರಿಂದ ಹೆಚ್ಚು ಜಾಗರೂಕವಾಗಿರಬೇಕು ಎಂದು ಸೂಚಿಸಿದ್ದಾರೆ. ಈ ಎಚ್ಚರಿಕೆ ಜೊತೆಜೊತೆಗೆ ಸಮಾಧಾನಕರ ಸಂಗತಿಯನ್ನು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಹೊಸ ರೂಪಾಂತರ ಸೃಷ್ಟಿಯಾಗದೇ ಇದ್ದರೆ, ಎರಡನೇ ಅಲೆಯಂತೆ ಮೂರನೇ ಅಲೆ ಭೀಕರ ಸ್ವರೂಪ ಪಡೆಯುವ ಸಾಧ್ಯತೆ ಇಲ್ಲ ಎಂಬ ಅಂಶವನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ. ಗಗನ್‌ದೀಪ್ ಕಂಗ್ ಉಲ್ಲೇಖಿಸಿದ್ದಾರೆ.
'ದೇಶದಲ್ಲಿ ಬಹುಪಾಲು ಜನಸಂಖ್ಯೆ ಈಗಾಗಲೇ ಸೋಂಕಿಗೆ ತುತ್ತಾಗಿದೆ ಹಾಗೂ ಬಹಳಷ್ಟು ಜನರು ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪಡೆದಿದ್ದಾರೆ. ಹೀಗಾಗಿ ಮೂರನೇ ಅಲೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಕಡಿಮೆ ಇದೆ' ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರಚಿಸಿದ ತಜ್ಞರ ಸಮಿತಿಯು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಸೋಂಕಿನ ಸಾಧ್ಯತೆ ಇರುವುದರಿಂದ ಮಕ್ಕಳ ಚಿಕಿತ್ಸೆಗೆ ಸೌಲಭ್ಯಗಳು, ವೈದ್ಯರು, ವೆಂಟಿಲೇಟರ್‌ಗಳು, ಆಂಬುಲೆನ್ಸ್‌ಗಳು ಮುಂತಾದ ಸಾಧನಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದ್ದು, ಪ್ರಧಾನಿ ಕಚೇರಿಗೆ ವರದಿ ಸಲ್ಲಿಸಿದೆ.