ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಮೆರಿಕಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ಅಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಮತ್ತು ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆ. 24 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಇದು ಜೋ ಬೈಡೆನ್ ಅವರು ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ವೈಯಕ್ತಿಕ ಭೇಟಿಯಾಗಿದೆ.
ಕ್ವಾಡ್ ಸಭೆಯಲ್ಲಿ ಭಾಗವಹಿಸಲಿರುವ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಪ್ರಧಾನಿಯವರು ಅಮೆರಿಕಾಗೆ ಭೇಟಿ ನೀಡುತ್ತಿರುವ ಸಮಯದಲ್ಲಿ, ಆ ದೇಶದ ಪರಿಸ್ಥಿತಿ ಮತ್ತು ಪ್ರದೇಶದ ಮೇಲಿನ ಅದರ ಪ್ರಭಾವ ಕುರಿತಾದ ಮಾತುಕತೆ ಕಾರ್ಯಸೂಚಿಯಲ್ಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.
ಮೋದಿ ಅವರು ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಪ್ರಸ್ತುತ ಪ್ರಾದೇಶಿಕ ಭದ್ರತೆಯ ಪರಿಸ್ಥಿತಿಯ ಕುರಿತು ಉಭಯ ಮುಖಂಡರು ಚರ್ಚಿಸಲಿದ್ದಾರೆ.
"ಮೂಲಭೂತವಾದ, ಉಗ್ರವಾದ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಜಾಗತಿಕ ಭಯೋತ್ಪಾದಕರ ಜಾಲವನ್ನು ಕಿತ್ತುಹಾಕುವ ಅಗತ್ಯವನ್ನು ಉಭಯ ಮುಖಂಡರೂ ಚರ್ಚಿಸಲಿದ್ದಾರೆ' ಎಂದು ಶೃಂಗ್ಲಾ ತಿಳಿಸಿದ್ದಾರೆ.
ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಕ್ವಾಡ್ ಸಭೆ ನಡೆಯಲಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹೈದೆ ಸುಗಾ ಜೊತೆಗೆ ಮೋದಿ ಮತ್ತು ಬೈಡೆನ್ ಭಾಗವಹಿಸಲಿದ್ದಾರೆ.