ಆನ್‍ಲೈನ್ ಸುದ್ದಿ ಸಂಸ್ಥೆಗಳಾದ ನ್ಯೂಸ್‍ಕ್ಲಿಕ್ ಹಾಗೂ ನ್ಯೂಸ್‍ಲಾಂಡ್ರಿ ಇವುಗಳ ದಕ್ಷಿಣ ದಿಲ್ಲಿ ಪ್ರದೇಶದಲ್ಲಿರುವ ಕಚೇರಿಗಳಿಗೆ ಇಂದು ಬೆಳಿಗ್ಗೆ ಭೇಟಿ ನೀಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ʼಸಮೀಕ್ಷೆಗಳನ್ನುʼ ನಡೆಸಿದ್ದಾರೆ. ಈ ವಿದ್ಯಮಾನದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ಆದರೆ ಐಟಿ ಅಧಿಕಾರಿಗಳು ಇನ್ನೂ ತಮ್ಮ ಕಚೇರಿಗಳಲ್ಲಿದ್ದಾರೆ ಎಂದು ಅಲ್ಲಿನ ಕೆಲ ಉದ್ಯೋಗಿಗಳು ಮಾಹಿತಿ ನೀಡಿದ್ದಾರೆಂದು ದಿ ವೈರ್ ವರದಿ ಮಾಡಿದೆ.
ಈ ಭೇಟಿ ಕೇವಲ ಸಮೀಕ್ಷೆಗಳು, ದಾಳಿಗಳಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಒಂದು ಸಂಸ್ಥೆಯ ವಿತ್ತೀಯ ದಾಖಲೆಗಳನ್ನು ಪರಿಶೀಲಿಸಲು ಈ ಭೇಟಿ ನೀಡಲಾಗಿದೆಯೇ ವಿನಹ ಏನನ್ನೂ ವಶಪಡಿಸಿಕೊಳ್ಳಲು ಅಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.
ಎರಡೂ ಸಂಸ್ಥೆಗಳ ಎಲ್ಲಾ ಉದ್ಯೋಗಿಗಳ ಫೋನ್‍ಗಳನ್ನು ಸ್ವಿಚ್ ಆಫ್ ಮಾಡಿಸಲಾಗಿದೆ ಹಾಗೂ ಮನೆಗಳಿಂದಲೇ ಕೆಲಸ ಮಾಡುವ ಸಂಸ್ಥೆಯ ಉದ್ಯೋಗಿಗಳಿಗೆ ಕಚೇರಿಯನ್ನು ಸಂಪರ್ಕಿಸಲಾಗುತ್ತಿಲ್ಲ ಎಂಬ ಮಾಹಿತಿ ಇದೆ.
ಎಲ್ಲಾ ಉದ್ಯೋಗಿಗಳ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಒಬ್ಬರು ಉದ್ಯೋಗಿ ತಿಳಿಸಿದ್ದಾರೆಂದೂ ಹೇಳಲಾಗಿದೆ. ನ್ಯೂಸ್ ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಹಿರಿಯ ಸಂಪಾದಕ ಪ್ರಾಂಜಲ್ ಅವರ ಫೋನ್‍ಗಳೂ ಸ್ವಿಚ್ ಆಫ್ ಆಗಿವೆ.
ಬೆಳಿಗ್ಗೆ ಸುಮಾರು 11.40ರ ಹೊತ್ತಿಗೆ ಐಟಿ ಅಧಿಕಾರಿಗಳು ನ್ಯೂಸ್‍ಲಾಂಡ್ರಿ ಕಚೇರಿಗೆ ಆಗಮಿದ್ದರೆನ್ನಲಾಗಿದ್ದು ಅಪರಾಹ್ನ 3 ಗಂಟೆ ಹೊತ್ತಿಗೆ ಕೆಲ ಉದ್ಯೋಗಿಗಳಿಗೆ ಹೊರ ತೆರಳಲು ತಿಳಿಸಲಾಯಿತು ಎನ್ನಲಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ವರ್ಷದ ಫೆಬ್ರವರಿಯಲ್ಲಿ ನ್ಯೂಸ್‍ಕ್ಲಿಕ್ ಕಚೇರಿಗಳ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.