ಲಕ್ನೋ: ಉತ್ತರ ಪ್ರದೇಶದ ಫಿರೋಜಾಬಾದ್ ಮತ್ತು ಮಥುರಾ ಜಿಲ್ಲೆಗಳಲ್ಲಿ ಅಟ್ಟಹಾಸ ತೋರಿದ ಡೆಂಗ್ಯೂ ಮತ್ತು ವೈರಲ್ ಜ್ವರಕ್ಕೆ ನೂರಾರು ಮಂದಿ ಪ್ರಾಣ ಬಿಟ್ಟಿದ್ದು ಆಗಿದೆ. ಈಗದೇ ಮಹಾಮಾರಿಯು ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದ ಪೂರ್ವ ಭಾಗಕ್ಕೂ ಲಗ್ಗೆ ಇಟ್ಟಿದೆ.
ಗಂಗಾ ಮತ್ತು ಯಮುನಾ ನದಿ ಸಂಗಮ ಕ್ಷೇತ್ರವಾದ ಪ್ರಯಾಗರಾಜ್ ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಕಳೆದೊಂದು ವಾರದಲ್ಲೇ 36ಕ್ಕೂ ಹೆಚ್ಚು ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ನಗರ ಪ್ರದೇಶಗಳಲ್ಲಿ 22 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 12 ಮಂದಿಯಲ್ಲಿ ಜ್ವರ ಪತ್ತೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 12 ಮಂದಿಗೆ ಗುಣಮುಖರಾಗಿದ್ದಾರೆ ಎಂದು ಪ್ರಾಥಮಿಕ ಅಂಕಿ-ಅಂಶಗಳಿಂದ ಗೊತ್ತಾಗಿದೆ.
ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, "ಪ್ರಯಾಗರಾಜ್ ಜಿಲ್ಲೆಯಲ್ಲಿ ಪರಿಸ್ಥಿತಿಯು ನಿಯಂತ್ರಣದಲ್ಲಿದ್ದು, ಡೆಂಗ್ಯೂ ಹಾಗೂ ವೈರಲ್ ಜ್ವರದ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ. ಈವರೆಗೂ ಡೆಂಗ್ಯೂ ಜ್ವರದಿಂದ ಜಿಲ್ಲೆಯಲ್ಲಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗಿಗಳ ಚಿಕಿತ್ಸೆಗಾಗಿ ಐಸೋಲೇಷನ್ ವಾರ್ಡ್ ಅನ್ನು ಸಿದ್ಧಪಡಿಸಲಾಗಿದ್ದು, ಚಿಕಿತ್ಸೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ," ಎಂದು ಪ್ರಾಧಿಕಾರ ಹೇಳಿದೆ.
ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆ ಜನಜಾಗೃತಿ:
"ಡೆಂಗ್ಯೂ ಜ್ವರ ಮತ್ತು ವೈರಲ್ ಜ್ವರದ ಪ್ರಮಾಣ ಹೆಚ್ಚಾಗುತ್ತಿರುವ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ರಕ್ತವನ್ನು ಒದಗಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳ ಸುತ್ತಮುತ್ತಲಿನಲ್ಲಿ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುವ ರೀತಿಯ ವಾತಾವರಣದಿಂದ ಮುಕ್ತವಾಗಿರುವಂತೆ ಅರಿವು ಮೂಡಿಸಲಾಗುತ್ತಿದೆ," ಎಂದು ಸಿಎಂಓ ಡಾ. ಸತ್ಯೇಂದ್ರ ರೈ ಹೇಳಿದ್ದಾರೆ. ಗೋವಿಂದಪುರದ ತೆಲಿಯಾಗಂಜ್ ಪ್ರದೇಶದಲ್ಲಿ 200 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಿದಾಗ 80 ಮನೆಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಡವರಿಗೆ ಸೊಳ್ಳೆ ಪರದೆ:
ಮಥುರಾ, ಫಿರೋಜಾಬಾದ್, ವಾರಣಾಸಿ, ಲಕ್ನೋ, ಕಾನ್ಪುರ, ಬಸ್ತಿ ಮತ್ತು ಮೀರತ್ ಜಿಲ್ಲೆಗಳ ನಂತರ, ಪ್ರಯಾಗರಾಜ್ ನಲ್ಲಿ ಡೆಂಗ್ಯೂ ಹರಡುವ ಆತಂಕ ಎದುರಾಗಿದೆ. ಆದರೆ ಇದು ಎಲ್ಲಾ ಹವಾಮಾನದ ಸೋಂಕು ಮತ್ತು ಹೊಸದೇನಲ್ಲ ಎಂದು ತಜ್ಞರು ಹೇಳಿದ್ದಾರೆ. ಪ್ರಯಾಗರಾಜ್ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕಾರ್ಡುದಾರರಿಗಾಗಿ ಒಟ್ಟು 9,000 ಸೊಳ್ಳೆ ಪರದೆಗಳನ್ನು ಉಚಿತವಾಗಿ ನೀಡಲು ಸಹ ಆದೇಶಿಸಲಾಗಿದೆ ಎಂದು ಸಿಎಂಓ ಡಾ ಸತ್ಯೇಂದ್ರ ರೈ ಹೇಳಿದರು.
24 ಗಂಟೆಗಳಲ್ಲಿ 497 ಜ್ವರದ ಪ್ರಕರಣ:
ರಾಜ್ಯ ಸರ್ಕಾರದ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಕಳೆದೊಂದು ದಿನದಲ್ಲಿ 497 ಜ್ವರ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 409 ಪ್ರಕರಣಗಳಲ್ಲಿ ಡೆಂಗ್ಯೂ ಜ್ವರ ತಗುಲಿರುವುದು ದೃಢಪಟ್ಟಿದ್ದು, 66 ಪ್ರಕರಣಗಳ ಬಗ್ಗೆ ಶಂಕೆ ವ್ಯಕ್ತವಾಗಿದ್ದು, 22 ಪ್ರಕರಣಗಳಲ್ಲಿ ವೈರಲ್ ಜ್ವರ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರವು ಡೆಂಗ್ಯೂ ಸೇರಿದಂತೆ ವೈರಲ್ ಜ್ವರದಿಂದ ಬಳಲುತ್ತಿರುವ ರೋಗಗಳ ಚಿಕಿತ್ಸೆಗೆ ಆಮ್ಲಜನಕ ಸೌಲಭ್ಯಗಳನ್ನು ಹೊಂದಿದ ಮತ್ತು COVID-19 ರೋಗಿಗಳಿಗೆ ಮೀಸಲಾಗಿರುವ ಹಾಸಿಗೆಗಳನ್ನು ಬಳಸಲು ನಿರ್ಧರಿಸಿದೆ.
ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಜ್ವರದ ಆತಂಕ:
ಸರ್ಕಾರಿ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 12 ಮಕ್ಕಳು ಜ್ವರದಿಂದ ದಾಖಲಾಗಿದ್ದು, ಈ ಪೈಕಿ 7 ಮಂದಿ ಲಕ್ನೋ ಮೂಲದವರು ಎಂದು ಗೊತ್ತಾಗಿದೆ. ಲೋಹಿಯಾ ಆಸ್ಪತ್ರೆಯ ಮಕ್ಕಳ ವಿಭಾಗ ಮತ್ತು ಔಷಧೀಯ ಕೇಂದ್ರದ ಎದುರಿನಲ್ಲಿ ಜನರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ರೋಗಶಾಸ್ತ್ರದಲ್ಲಿ ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಜ್ವರದಿಂದ ಬಳಲುತ್ತಿರುವ 15 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 70ಕ್ಕೂ ಹೆಚ್ಚು ಜ್ವರ ಪೀಡಿತರು ವಿವಿಧ ಇಲಾಖೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೌರಾವ್ ದೇವರಾಸ್ ಆಸ್ಪತ್ರೆಯಲ್ಲಿ ಹೆಚ್ಚಿನ ರೋಗಿಗಳು ಮಕ್ಕಳ ಮತ್ತು ವೈದ್ಯಕೀಯ ವಿಭಾಗಗಳಿಗೆ ಬರುತ್ತಿದ್ದಾರೆ. ಮಕ್ಕಳ ವಿಭಾಗದ 10 ಬೆಡ್ ಭರ್ತಿಯಾಗಿವೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮನೀಶ್ ಪ್ರಕಾರ, 10 ರಿಂದ 15 ಮಕ್ಕಳು ಪ್ರತಿದಿನ ಜ್ವರದ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ.