ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೇಲ್ ಸಿಂಗ್ ಅವರ ಮೊಮ್ಮಗ ಇಂದ್ರಜೀತ್ ಸಿಂಗ್ ಅವರು ಸೋಮವಾರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಘಟಕದ ಉಸ್ತುವಾರಿ ದುಷ್ಯಂತ್ ಗೌತಮ್, ಇದು ಪಂಜಾಬ್‌ನ ಜನರ ಹೃದಯದಲ್ಲಿ ಪಕ್ಷಕ್ಕೆ ವಿಶೇಷ ಸ್ಥಾನವಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ಇಲ್ಲಿನ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರಿದ ನಂತರ ಮಾತನಾಡಿದ ಇಂದ್ರಜೀತ್ ಸಿಂಗ್ ಅವರು, ತಮ್ಮ ತಾತನ ಆಸೆಗಳನ್ನು ಪೂರೈಸಿರುವುದಾಗಿ ತಿಳಿಸಿದರು.
'ನನ್ನ ತಾತನೊಂದಿಗೆ ಕಾಂಗ್ರೆಸ್ ಸರಿಯಾಗಿ ವರ್ತಿಸಲಿಲ್ಲ. ದೆಹಲಿಯಲ್ಲಿ ನಾನು ಮದನ್ ಲಾಲ್ ಖುರಾನಾ ದಿನಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದೆ. ನನ್ನ ತಾತ ನಾನು ಬಿಜೆಪಿಗೆ ಸೇರಬೇಕೆಂದು ಬಯಸಿದ್ದರು. ಅವರು ನನಗೆ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರನ್ನು ಪರಿಚಯಿಸಿದ್ದರು' ಹೇಳಿದರು.
ಸಿಂಗ್ ಅವರು ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ರಾಮಗರ್ಹಿಯಾ ಸಿಖ್ ಸಮುದಾಯದಿಂದ ಬಂದವರು. ಈ ಸಮುದಾಯವು ಪಂಜಾಬ್‌ನ ದೋಬಾ ಮತ್ತು ಮಜಾ ಪ್ರಾಂತ್ಯಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿದೆ.