ಕೋಲ್ಕತ್ತಾ: ನನ್ನ ಮಗುವಿನ ತಂದೆ ಯಾರು ಎಂದು ಆ ತಂದೆಗಷ್ಟೇ ಗೊತ್ತು, ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಖ್ಯಾತ ಬಂಗಾಳಿ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.
ತಮ್ಮ ವಿವಾಹದ ಕುರಿತು ಭುಗಿಲೆದ್ದಿದ್ದ ವಿವಾದದ ನಡುವೆಯೇ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದ ನುಸ್ರತ್ ಜಹಾನ್ ಅವರು, ತಮ್ಮ ಮಗುವಿನ ತಂದೆ ಯಾರು ಎಂಬ ವಿಷಯದಲ್ಲಿ ಮೊದಲ ಬಾರಿಗೆ ಮೌನ ಮುರದಿದ್ದಾರೆ.
ಕಳೆದ ತಿಂಗಳು ಆ 26 ರಂದು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಇಂದು ಕೋಲ್ಕತ್ತಾದಲ್ಲಿ ಸಲೂನ್ ಒಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿದ್ದ ಪತ್ರಕರ್ತರು ಮಗುವಿನ ತಂದೆಯ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಖಾರವಾಗಿಯೇ ಉತ್ತರಿಸಿದ ನುಸ್ರತ್ ಜಹಾನ್, 'ನನ್ನ ಮಗುವಿನ ತಂದೆ ಯಾರು ಎಂಬುದು ಆ ತಂದೆಗೆ ಅಷ್ಟೇ ಗೊತ್ತು.. ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಅಲ್ಲದೆ ಪತ್ರಕರ್ತರನ್ನೇ ಗುರಿಯಾಗಿಸಿಕೊಂಡ ನುಸ್ರತ್ ಜಹಾನ್, 'ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಒಂದು ಮಹಿಳೆಗೆ ಮಾಡುವ ಅವಮಾನ, ನಾನು ಹಾಗೂ ಯಶ್ ದಾಸ್ ಗುಪ್ತಾ ಮಗುವಿನ ಜೊತೆ ಖುಷಿಯಾಗಿದ್ದೇವೆ ಎಂದು ಹೇಳಿದರು.
ನುಸ್ರತ್ ಜಹಾನ್ ಹಾಗೂ ಟರ್ಕಿಯಲ್ಲಿರುವ ಉದ್ಯಮಿ ನಿಖಿಲ್ ಜೈನ್ ಅವರ ವೈವಾಹಿಕ ಸಂಬಂಧ ಅಂತ್ಯವಾದ ಬಳಿಕ ನುಸ್ರತ್ ಅವರ ಹೆಸರು ಯಶ್ ದಾಸ್ ಗುಪ್ತಾ ಅವರ ಜೊತೆ ಗುರುತಿಸಿಕೊಂಡಿತ್ತು. ಅಲ್ಲದೇ ಈ ನಡುವೆಯೇ ಅವರು ಗರ್ಭಿಣಿಯಾದರು. ಗರ್ಭಿಣಿಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನುಸ್ರತ್ ಮಗುವಿನ ತಂದೆ ಯಾರು? ಎಂದು ಅನೇಕರು ಪ್ರಶ್ನೆ ಕೇಳುತ್ತಿದ್ದರು. ಮಾಧ್ಯಮಗಳಿಂದಲೂ ನುಸ್ರತ್ ಪ್ರಶ್ನೆ ಎದುರಿಸಬೇಕಾಗಿತ್ತು. ಆದರೆ, ನುಸ್ರತ್ ಅವರು ಮಾತ್ರ ಇನ್ನೂ ಗುಟ್ಟು ಕಾಪಾಡಿಕೊಂಡಿದ್ದಾರೆ.
ನಿಖಿಲ್ ಜೈನ್ ಅವರನ್ನು ನುಸ್ರತ್ 2019 ರಲ್ಲಿ ಟರ್ಕಿಯಲ್ಲಿ ವಿವಾಹವಾಗಿದ್ದರು ಎನ್ನಲಾಗಿತ್ತು. ಆದರೆ, ಇದು ಭಾರತೀಯ ಕಾನೂನು ಪ್ರಕಾರ ಮದುವೆಯಲ್ಲ, ಅದೊಂದು ಲೀವ್ ಇನ್ ರಿಲೇಶನಿಷಿಪ್.. ಹೀಗಾಗಿ ವಿಚ್ಛೇದನದ ಮಾತೇ ಬರುವುದಿಲ್ಲ ಎಂದು ನುಸ್ರತ್ ಹೇಳಿದ್ದರು.