ವಾಷಿಂಗ್ಟನ್ : ಭಾರತ ಲಸಿಕೆ ರಫ್ತು ಕುರಿತು ತೆಗೆದುಕೊಂಡಿರುವ ನಿರ್ಧಾರ ಉತ್ತಮ ಬೆಳವಣಿಗೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.
ವರ್ಷಾಂತ್ಯದೊಳಗೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇ.40ರಷ್ಟು ಲಸಿಕೆಗಳನ್ನು ನೀಡಬೇಕು ಎಂಬ ಗುರಿ ಸಾಧನೆಗೆ ಭಾರತದ ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧೊನಮ್ ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಕೋವಿಡ್ ಲಸಿಕೆ ರಫ್ತಿಗೆ ಚಾಲನೆ ನೀಡುವುದಾಗಿ ಘೋಷಿಸಿರುವುದಕ್ಕೆ ಆರೋಗ್ಯ ಸಚಿವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿರುವ ಅವರು, ಭಾರತದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಕೊರೊನಾ ಎರಡನೇ ಅಲೆ ಏಪ್ರಿಲ್‌ನಲ್ಲಿ ಕಾಣಿಸಿಕೊಂಡಾಗ, ಭಾರತ ಕೋವಿಡ್ ಲಸಿಕೆಗಳ ರಫ್ತನ್ನು ಸ್ಥಗಿತಗೊಳಿಸಿತ್ತು. ಬರುವ ಅಕ್ಟೋಬರ್‌ನಿಂದ ದೇಶದಲ್ಲಿ ಹೆಚ್ಚುವರಿ ಕೋವಿಡ್ ಲಸಿಕೆ ರಫ್ತು ಪುನರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿದ ಭಾರತ ಕೋವಿಡ್ ಲಸಿಕೆಗಳ ರಫ್ತನ್ನು ಹಠಾತ್ತಾಗಿ ಸ್ಥಗಿತಗೊಳಿಸಿತ್ತು. ಈಗ ಅದನ್ನು ಮತ್ತೆ ಅಕ್ಟೋಬರ್‌ನಿಂದ ಆರಂಭಿಸಲಾಗುವುದು ಎಂದರು.
ನಮ್ಮ ಧ್ಯೇಯವಾಕ್ಯವಾದ ವಸುಧೈವ ಕುಟುಂಬಕಂಗೆ ಅನುಗುಣವಾಗಿ ಕೋವಿಡ್ ಲಸಿಕೆ ರಫ್ತು ಮಾಡಲಾಗುವುದು ಎಂದು ಮಾಂಡವೀಯ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಕೇಂದ್ರವು ವಿವಿಧ ಲಸಿಕೆ ತಯಾರಕರಿಂದ 30 ಕೋಟಿ ಪೂರೈಕೆಯನ್ನು ನಿರೀಕ್ಷಿಸುತ್ತಿದೆ. ಇದು ಮುಂದಿನ ತಿಂಗಳುಗಳಲ್ಲಿ ಕೋವಿಡ್ ಲಸಿಕೆ ಲಭ್ಯತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.
ಅಕ್ಟೋಬರ್ 2021 ರಿಂದ ಆರಂಭವಾಗುವ ನಾಲ್ಕನೇ ತ್ರೈಮಾಸಿಕದಲ್ಲಿ "ಲಸಿಕೆ ಮೈತ್ರಿ" ಕಾರ್ಯಕ್ರಮದ ಅಡಿಯಲ್ಲಿ ಲಸಿಕೆಯ ರಫ್ತು ಪುನರಾರಂಭವಾಗಲಿದೆ ಎಂದು ಮಾಂಡವಿಯಾ ಅವರು ತಿಳಿಸಿದ್ದಾರೆ.
ಭಾರತೀಯರಿಗೆ ಕೋವಿಡ್ ಲಸಿಕೆ ನೀಡುವುದು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ. ಆದರೆ ಹೆಚ್ಚುವರಿ ಕೋವಿಡ್ ಲಸಿಕೆಯನ್ನು ರಫ್ತು ಮಾಡಲಾಗುವುದು. "ಕೋವ್ಯಾಕ್ಸ್ ಬಗ್ಗೆ ಭಾರತದ ಬದ್ಧತೆಯನ್ನು ಪೂರೈಸುವ ಸಲುವಾಗಿ ಭಾರತ "ಲಸಿಕೆ ಮೈತ್ರಿ" ಅಡಿಯಲ್ಲಿ ಲಸಿಕೆಗಳ ರಫ್ತನ್ನು ಪುನರಾರಂಭಿಸಲಿದೆ ಎಂದಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 79.58 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಹೇಳಿದೆ.
ಕೆಲವೇ ದಿನಗಳಲ್ಲಿ 15,51,940 ಡೋಸ್ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‌ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು.
ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ 1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.