ಕಾಸರಗೋಡು: ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡು ಹಾಗೂ ಇಲ್ಲಿನ ಧಾರ್ಮಿಕ ಕ್ಷೇತ್ರವಾದ ಎಡನೀರು ಶ್ರೀ ಮಠಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತ ಶಾಸಕರ ಬೆಂಬಲವಿದೆ ಎಂದು ಪುತ್ತೂರು ಶಾಸಕ ಸಂಜೀವ ಮಟಂದೂರು ಭರವಸೆ ನೀಡಿದರು. ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿರುವ ಕಾಸರಗೋಡಿನ ಕನ್ನಡ ಜನರ ಸಮಸ್ಯೆಗಳಿಗೆ ನಾವೆಲ್ಲರೂ ಒಟ್ಟಾಗಿ ದುಡಿಯುವುದಾಗಿ ಅವರು ಕರೆ ನೀಡಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಅವರು ಇತ್ತೀಚೆಗೆ ಎಡನೀರು ಶ್ರೀ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಥಮ ಚಾತುರ್ಮಾಸ್ಯ ಆಚರಿಸುತ್ತಿರುವ ಶ್ರೀಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದರು. ಸಭೆಯಲ್ಲಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಗುರು ಸ್ಮರಣೆ ಮಾಡಿದರು. ರವೀಶ ತಂತ್ರಿ ಸ್ವಾಗತಿಸಿ, ವಂದಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.