ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಇಲ್ಲಿ ರಷ್ಯಾದ ಸಹವರ್ತಿ ಜನರಲ್ ನಿಕೋಲಾಯ್ ಪತ್ರುಶೇಷ್ ಅವರ ಜತೆ ಅಫ್ಗಾನಿಸ್ತಾನದ ಕುರಿತು ಮಾತುಕತೆ ನಡೆಸಿದರು. ಅಫ್ಗಾನಿಸ್ತಾನ ತಾಲಿಬಾನ್ ವಶವಾಗಿರುವುದರಿಂದ ಎದುರಿಸಬೇಕಾಗುವ ಸಂಭವನೀಯ ಭದ್ರತಾ ಪರಿಣಾಮಗಳ ಕುರಿತು ಈ ವೇಳೆ ವ್ಯಾಪಕ ಚರ್ಚೆ ನಡೆಸಿದಿದೆ.
ಭಾರತ, ರಷ್ಯಾ ಮತ್ತು ಮಧ್ಯ ಏಷ್ಯಾ ಪ್ರದೇಶದಲ್ಲಿ ಎದುರಾಗಬಹುದಾದ ಸಂಭಾವ್ಯ ದಾಳಿಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ.
ತಾಲಿಬಾನ್‌ನಿಂದ ಎದುರಾಗಬಹುದಾದ ಸವಾಲುಗಳನ್ನು ಸಂಘಟಿತವಾಗಿ ಹೇಗೆ ಎದುರಿಸಬಹುದು ಎಂಬುದರ ಕುರಿತು ವಿಚಾರ ವಿನಿಮಯ ನಡೆದಿದೆ. ಅಫ್ಗಾನಿಸ್ತಾನದಲ್ಲಿ ಪ್ರಬಲ ಅಸ್ತಿತ್ವ ಹೊಂದಿರುವ ಜೈಶ್-ಎ-ಮೊಹಮ್ಮದ್, ಲಷ್ಕರ್ ಎ ತೊಯಬಾ ಸೇರಿದಂತೆ ಇತರ ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳನ್ನು ಈ ವೇಳೆ ಪರಾಮರ್ಶಿಸಲಾಯಿತು.
ಅಫ್ಗನ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ದೋವಲ್ ಅವರು ಅಮೆರಿಕದ ಕೇಂದ್ರೀಯ ಗುಪ್ತಚರ ವಿಭಾಗ (ಸಿಐಎ) ನಿರ್ದೇಶಕರಾದ ವಿಲಿಯಂ ಬರ್ನ್ಸ್ ಅವರೊಂದಿಗೆ ಚರ್ಚೆ ನಡೆಸಿದ ಮರು ದಿನ, ರಷ್ಯಾ ಸಹವರ್ತಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಿಐಎ ಮುಖ್ಯಸ್ಥರು ಕೆಲ ಅಧಿಕಾರಿಗಳ ಜತೆಗೂಡಿ ಭಾರತಕ್ಕೆ ಭೇಟಿ ನೀಡಿ, ಅಪ್ಗನ್ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ರಾಯಭಾರ ಕಚೇರಿ ನಿರಾಕರಿಸಿದೆ. ಭಾರತೀಯ ಭದ್ರತಾ ಸಂಸ್ಥೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.