ಅಯೋಧ್ಯೆ: ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ, ಇಲ್ಲವಾದಲ್ಲಿ ಅ.2ರಂದು ಜಲಸಮಾಧಿಯಾಗುವುದಾಗಿ ತಪಸ್ವಿ ಛಾವಣಿಯ ಉತ್ತರಾಧಿಕಾರಿ ಮಹಂತ್ ಪರಮಹಂಸ್ ಆಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಅ.1ರಂದು ಸಂತರ ಧಾರ್ಮಿಕ ಸಮ್ಮೇಳನ ಆಯೋಜಿಸಿ, ಅ.2ರಂದು ಜಲಸಮಾಧಿಯಾಗುತ್ತೇನೆಂದು ಹೇಳಿದ್ದಾರೆ.
'ದೇಶದ ನಾಗರೀಕರನ್ನು ರಕ್ಷಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಬಹಳ ಮುಖ್ಯ. ಇನ್ನು ನಾನು ಸಂತರ ಸಂಪ್ರದಾಯವನ್ನು ಅನುಸರಿಸಿದ್ದೇನೆ. ಸಾವಿನ ನಂತರ ಮಾಡಬೇಕಾದ ಕ್ರಿಯೆಗಳನ್ನು ಮೊದಲೇ ಮಾಡಿ ಮುಗಿಸಿದ್ದೇನೆ. ವೇದ ಮಂತ್ರಗಳ ಮೂಲಕ ನಾನು ಧರಿಸಿರುವ ಕವಚವನ್ನು ಶುದ್ಧೀಕರಿಸಿದ್ದೇನೆ. ಈ ಕವಚವನ್ನು ನನ್ನ ಮೇಲೆ ಹಾಕಿಕೊಂಡು, ನಾನು ಅಕ್ಟೋಬರ್ 2 ರಂದು ಜಲ ಸಮಾಧಿಯಾಗುತ್ತೇನೆ" ಎಂದು ಹೇಳಿದ್ದಾರೆ.
ದೇಶದ ಜನರ ಹಿತಾಸಕ್ತಿ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಈ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ನಾನು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಬೇಡಿಕೆ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ದೇಶದ ಕಾನೂನು ಸುವ್ಯವಸ್ಥೆ ಮತ್ತು ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ. ಇಂತಹ ಪರಿಸ್ಥಿತಿ ಬರದಂತೆ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಬಹಳ ಮುಖ್ಯ. ಹಾಗೆ ಮಾಡದಿದ್ದಲ್ಲಿ ಅಕ್ಟೋಬರ್ 2 ರಂದು ನಾನು ಜಲ ಸಮಾಧಿಯಾಗುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.