ನವದೆಹಲಿ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಕಲಾಗುತ್ತಿರುವ ಆಸ್ಟ್ರಾಜೆನೆಕಾ ಕೋವಿಡ್-19 ಲಸಿಕೆ ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆಗೊಳಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
'ಖಾಸಗಿ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಹಣ ಪಾವತಿಸಿ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪಡೆಯುವ ರೋಗಿಗಳಿಗೆ ಲಸಿಕೆಯ ಎರಡನೇ ಡೋಸ್ ಅನ್ನು 4 ವಾರಗಳ ನಂತರ ಪಡೆಯುವ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ. ಪ್ರಸ್ತುತ ಮೊದಲ ಮತ್ತು ಎರಡನೇ ಡೋಸ್ ನಡುವೆ 12ರಿಂದ 16 ವಾರಗಳ ಕಾಲ ಅಂತರವಿದೆ' ಎಂದೂ ಮೂಲಗಳು ಹೇಳಿವೆ.
ಡೋಸ್‌ಗಳ ನಡುವಿನ ಅಂತರ ಕಡಿಮೆಗೊಳಿಸುವ ಕುರಿತು ಸೆಪ್ಟೆಂಬರ್ ಆರಂಭದಲ್ಲಿ ಕೇರಳದ ಹೈಕೋರ್ಟ್ ಆದೇಶ ನೀಡಿತ್ತು. ವಿದೇಶಕ್ಕೆ ತೆರಳುವವರು ಆರೋಗ್ಯ ಸಚಿವಾಲಯದ ಲಸಿಕಾ ಪೋರ್ಟಲ್‌ನಲ್ಲಿ ಬುಕ್ ಮಾಡಿದಲ್ಲಿ ಈ ಆಯ್ಕೆಯನ್ನು ನೀಡಲಾಗುತ್ತಿದೆ.
'ಹೈಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ, ಸರ್ಕಾರದ ಲಸಿಕಾ ಕಾರ್ಯಕ್ರಮಗಳಲ್ಲಿ 12 ವಾರಗಳ ಅಂತರ ಹಾಗೇ ಮುಂದುವರಿಯಲಿದೆ' ಎಂದೂ ಮೂಲಗಳು ತಿಳಿಸಿವೆ.
ಆಸ್ಟ್ರಾಜೆನೆಕಾ ಕಂಪನಿಯು ತನ್ನ ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು 4 ವಾರಗಳ ನಂತರ ತೆಗೆದುಕೊಳ್ಳಲು ಶಿಫಾರಸು ಮಾಡುತ್ತದೆ. ಆದರೆ, ಮೊದಲ ಮತ್ತು ಎರಡನೇ ಡೋಸ್‌ನ ನಡುವೆ 12 ವಾರಗಳ ಅಂತರವಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದೆ.