ಕಾಸರಗೋಡು: ಅರಿವನ್ನು ವಿಸ್ತರಿಸುವ ನುಡಿಮುತ್ತುಗಳು ಸರ್ವಜ್ಞನ ವಚನಗಳಲ್ಲಿ ಅಡಕವಾಗಿದ್ದು, ಅವುಗಳನ್ನು ಅರಿತು ನಡೆಯಬೇಕಾದ ಕರ್ತವ್ಯ ನಮ್ಮದಾಗಬೇಕು ಎಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ.ವಿಶ್ವನಾಥ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡಿನ ಪೆರಿಯ ಕ್ಯಾಂಪಸ್‍ನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ ಸಾಹಿತ್ಯಯಾನದ ಹದಿನೈದನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
'ಸರ್ವಜ್ಞನ ವಚನಗಳಲ್ಲಿ ಸಂಸ್ಕøತಿ'ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು, ವಿದ್ಯಾವಂತರೆಂದರೆ ಕೇವಲ ಪದವಿ ಪಡೆಯುವುದಲ್ಲ. ಅನುಭವದ ಮೂಲಕ ನಿತ್ಯ ವ್ಯವಹಾರಗಳಲ್ಲಿ ಜಗತ್ತಿನ ಆಗುಹೋಗುಗಳನ್ನು ತಿಳಿಯುವುದೇ ನಿಜವಾದ ಶಿಕ್ಷಣ. ವಿದ್ಯೆ ಎಂಬುದು ಬದುಕಿನ ಕಲೆಯಾಗಿದ್ದು, ಪ್ರತಿಯೊಂದು ವಿದ್ಯೆಯೂ ಬದುಕಿಗೆ ಆಧಾರವಾಗಿರಬೇಕು. ಬದುಕಿಗೆ ಪ್ರೇರಕವಾದ ಅನುಭವ ಕೇಂದ್ರಿತ ಶಿಕ್ಷಣವನ್ನು ಸರ್ವಜ್ಞ ತನ್ನ ವಚನಗಳಲ್ಲಿ ಪ್ರಸ್ತುತಪಡಿಸುತ್ತಾರೆ ಎಂದು ತಿಳಿಸಿದರು.
ಕೇಂದ್ರೀಯ ವಿ.ವಿ ಕನ್ನಡ ವಿಭಾಗದ ಅತಿಥಿ ಉಪನ್ಯಾಸಕಿ ಬಬಿತಾ ಎ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸ್ವಾತಿ ಎನ್. ಸ್ವಾಗತಿಸಿದರು.ವಿಸ್ಮಯ ಕಾರ್ಯಕ್ರಮ ನಿರೂಪಿಸಿದರು. ನಿಶ್ಮಿತ ಇ.ಆರ್.ವಂದಿಸಿದರು.