HEALTH TIPS

ಗೇರು ಕೃಷಿಕರಿಗೆ ಸಿಹಿಸುದ್ದಿ; ಪುತ್ತೂರಿನಲ್ಲಿ ಹೊಸ ಸಂಶೋಧನೆ

 


             ಮಂಗಳೂರು: ವಿವಿಧ ತಳಿಯ ಗೇರು ಸಸಿಗಳ ಸಂಶೋಧನೆಯಲ್ಲಿ ಅಮೂಲಾಗ್ರ ಸಾಧನೆ ತೋರಿರುವ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ ಈ ಬಾರಿ ಮತ್ತೊಂದು ಗೇರು ಸಸಿಯನ್ನು ಪರಿಚಯಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಗುವ ಗೇರು ಬೀಜಕ್ಕಿಂತ ದೊಡ್ಡ ಗಾತ್ರದ ಬೀಜಗಳನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿರುವ ಈ ಸಸಿಗಳಿಂದ ಉತ್ತಮ ಗೇರು ಇಳುವರಿಯನ್ನು ಪಡೆಯುವ ನಿರೀಕ್ಷೆಯನ್ನು ಹೊಂದಲಾಗಿದೆ.

              ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ (ಡಿಸಿಆರ್) ಹೊಸ ತಳಿಯ ಗೇರು ಬೀಜ ಸಂಶೋಧನೆ ಮಾಡಲಾಗಿದೆ.

              ದೊಡ್ಡಗಾತ್ರದ ಬೀಜವಿರುವ ಈ ತಳಿಯನ್ನು ನೇತ್ರಾ ಜಂಬೋ-1 ಎಂದು ಹೆಸರಿಸಲಾಗಿದ್ದು, ಈ ವಿಶಿಷ್ಟ ತಳಿಯಿಂದ ಮುಂದಿನ ದಿನಗಳಲ್ಲಿ ಗೇರು ಬೆಳೆಗಾರರು ಉತ್ತಮ ಫಸಲು ಹಾಗೂ ಆದಾಯವನ್ನು ನಿರೀಕ್ಷಿಸಬಹುದಾಗಿದೆ.

            ಸಾಮಾನ್ಯವಾಗಿ ಹೆಚ್ಚಿನ ಗೇರು ಬೀಜಗಳು 6 ರಿಂದ 8 ಗ್ರಾಂ ತೂಕವನ್ನು ಹೊಂದಿದ್ದರೆ, ಪುತ್ತೂರಿನ ಗೇರು ಸಂಶೋಧನಾಲಯ ಅಭಿವೃದ್ಧಿಪಡಿಸಿರುವ ಈ ನೇತ್ರಾ ಜಂಬೋ ಬೀಜಗಳು 12 ರಿಂದ 13 ಗ್ರಾಂ ತೂಕವಿದೆ. ಈ ನೇತ್ರಾ ಜಂಬೋ ತಳಿಯ ಸಂಶೋಧನೆಯನ್ನು ಸಂಸ್ಥೆಯು 2000 ಇಸವಿಯಿಂದ ಮಾಡಿದ್ದು, ಹಲವು ಸಂಶೋಧನೆ ಹಾಗೂ ಆವಿಷ್ಕಾರದ ಬಳಿಕ ಇದೀಗ 2021ರಲ್ಲಿ ಈ ತಳಿಯ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

             ಬೀಜದ ಗಾತ್ರ ಹೆಚ್ಚಿದಷ್ಟು ರೈತರಿಗೆ ಲಾಭ ಎನ್ನುವ ಕಾರಣಕ್ಕಾಗಿ ಈ ರೀತಿಯ ಸಸಿಗಳ ಅಭಿವೃದ್ಧಿಗೆ ಡಿಸಿಆರ್ ಮುಂದಾಗಿತ್ತು. ಕಡಿಮೆ ಬೀಜ ಹೆಕ್ಕಿ ಜಾಸ್ತಿ ತೂಕ ಗಳಿಸಬಹುದು. ಮಾರುಕಟ್ಟೆಯಲ್ಲಿ ದೊಡ್ಡ ಬೀಜಗಳಿಗೆ ಹೆಚ್ಚಿನ ದರ ಸಿಗುತ್ತದೆ. ಇದರ ಸಂಸ್ಕರಣೆಯೂ ಸುಲಭವಿದೆ. ಇದನ್ನೆಲ್ಲ ಮನಗಂಡು ದೊಡ್ಡ ಬೀಜ ಬಿಡುವ ನೇತ್ರಾ ಜಂಬೋ-1 ತಳಿಯ ಅಭಿವೃದ್ಧಿಗೆ ಸಂಸ್ಥೆಯಿಂದ ಹೆಚ್ಚಿನ ಶ್ರಮವನ್ನು ಹಾಕಲಾಗಿತ್ತು.

            ಈ ತಳಿಯ ಸಸಿಯಲ್ಲಿ ಬೆಳೆಯಲಾಗುವ ಶೇಕಡಾ 90ಕ್ಕೂ ಹೆಚ್ಚಿನ ಬೀಜಗಳದ್ದು ಒಂದೇ ಗಾತ್ರವಿದ್ದು, ಎಲ್ಲಾ ಬೀಜಗಳೂ ಸರಿ ಸುಮಾರು 12 ರಿಂದ 13 ಗ್ರಾಂ ನಷ್ಟು ತೂಗುತ್ತವೆ. 100 ಕೆಜಿ ಬೀಜ ಸಂಸ್ಕರಣೆಯಿಂದ 29 ರಿಂದ 30 ಕೆಜಿ ತಿರುಳು ಸಿಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಿರುವ ರಫ್ತು ಗುಣಮಟ್ಟಕ್ಕಿಂತ W-180 ಗಿಂತಲೂ ಹೆಚ್ಚಿನ ಗ್ರೇಡ್ W-130 ಗುಣಮಟ್ಟ ಈ ತಳಿಯ ತಿರುಳಿನದ್ದಾಗಿದೆ.

              ಈ ತಳಿಯಲ್ಲಿ ಹೆಕ್ಟೇರಿಗೆ 2 ಟನ್ ಇಳುವರಿ ಸಿಗಲಿದೆ. ಹಣ್ಣಿನ ತೂಕ 100 ರಿಂದ 150 ಗ್ರಾಂ ಗಿಂತ ಜಾಸ್ತಿ ಇದ್ದು, ಕೆಂಪು ಬಣ್ಣ ಹೊಂದಿದೆ. 10 ವರ್ಷದ ಒಂದು ವಯಸ್ಕ ಸಸಿಯಿಂದ 10 ಕಿಲೋದಷ್ಟು ಬೀಜಗಳನ್ನು ಪಡೆಯಬಹುದಾಗಿದ್ದು, 1 ಹೆಕ್ಟೇರ್ ಭೂಮಿಯಲ್ಲಿ 200 ಗಿಡಗಳನ್ನು ನೆಡಬಹುದಾಗಿದೆ. ಪ್ರತಿ ಗಿಡದಿಂದ 10 ಕಿಲೋದಂತೆ 200 ಗಿಡಗಳಿಂದ 2 ಟನ್ ಬೀಜಗಳನ್ನು ಪಡೆಯಬಹುದಾಗಿದ್ದು, ಈ ಗಿಡಗಳಿಗೆ ನೀರು ಹಾಯಿಸದೆಯೂ ಬೆಳೆಸಬಹುದಾಗಿದೆ.

            ಬೀಜ ಹೆಕ್ಕುವಾಗ 1 ಟನ್ ಇಳುವರಿಗೆ 16,000 ರೂಪಾಯಿ ಕೂಲಿ ಖರ್ಚನ್ನು ಉಳಿಸುತ್ತದೆ. ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ 1 ಟನ್ನಿಗೆ 10,000 ರೂಪಾಯಿ ಜಾಸ್ತಿ ಸಿಗುತ್ತದೆ. ಒಟ್ಟು 26,000 ರೂಗಳಷ್ಟು ಲಾಭ 1 ಟನ್ನಿಗೆ ಸಿಗುತ್ತದೆ.

            ಗೇರಿನಲ್ಲಿ ಸದ್ಯ ಕೃಷಿ ಮಾಡುತ್ತಿರುವ ತಳಿಗಳಾದ ಭಾಸ್ಕರ, ವಿಆರ್‍ಐ-3, ಉಳ್ಳಾಲ -3 ಇತ್ಯಾದಿಗಳು ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದವು. ಹಾಗಾಗಿ ಈ ದೊಡ್ಡ ಗಾತ್ರದ ಬೀಜದ ತಳಿ ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಹುಟ್ಟಿಸಬಲ್ಲುದು. ಪ್ರಸ್ತುತ ಇದಕ್ಕೆ ತಳಿ ಹಕ್ಕಿನ ರಕ್ಷಣೆ ಪಡೆಯುವ ಹಂತದಲ್ಲಿಯೂ ಪುತ್ತೂರಿನ ಗೇರು ಸಂಶೋಧನಾಲಯವಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries