ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಕೆಂಪುಕೋಟೆಗೆ ಸಂಪರ್ಕಿಸುವ ಗುಪ್ತ ಸುರಂಗ ಮಾರ್ಗವನ್ನು ಪತ್ತೆ ಮಾಡಲಾಗಿದೆ.
ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಸುರಂಗವು ವಿಧಾನಸಭೆಯನ್ನು ಕೆಂಪು ಕೋಟೆಗೆ ಸಂಪರ್ಕಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಸುರಂಗವನ್ನು ಬಳಸುತ್ತಿದ್ದರು ಎಂದು ಹೇಳಿದರು.
ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಹೋಗುವ ಸುರಂಗದ ಬಗ್ಗೆ ಕೇಳಿದ್ದೆ. ಅಲ್ಲದೆ ನಾನು ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದೆ. ಆದರೆ ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ ಎಂದು ಗೋಯೆಲ್ ಹೇಳಿದರು.
ಈಗ ನಾವು ಸುರಂಗದ ಮಾರ್ಗವನ್ನು ಪತ್ತೆ ಹಚ್ಚಿದ್ದೇವೆ. ಆದರೆ ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗದ ಎಲ್ಲಾ ಮಾರ್ಗಗಳು ನಾಶವಾಗಿರುವುದರಿಂದ ನಾವು ಅದನ್ನು ಮತ್ತಷ್ಟು ಅಗೆಯುತ್ತಿಲ್ಲ ಎಂದು ಹೇಳಿದರು.
1912ರಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದ ನಂತರ ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಗುತ್ತಿದ್ದ ದೆಹಲಿ ಶಾಸಕಾಂಗ ಸಭೆಯನ್ನು 1926ರಲ್ಲಿ ನ್ಯಾಯಾಲಯವಾಗಿ ಪರಿವರ್ತಿಸಲಾಯಿತು. ಬ್ರಿಟಿಷರು ಈ ಸುರಂಗವನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲು ಬಳಸಿದರು ಎಂದು ಗೋಯೆಲ್ ಮಾಹಿತಿ ನೀಡಿದರು.
'ಇಲ್ಲಿ ಗಲ್ಲು ಶಿಕ್ಷೆ ಕೋಣೆ ಇರುವುದು ಬಗ್ಗೆ ನಮಗೆಲ್ಲರಿಗೂ ತಿಳಿದಿತ್ತು. ಆದರೆ ಅದನ್ನು ಎಂದಿಗೂ ತೆರೆಯಲಿಲ್ಲ. ಈಗ ಸ್ವಾತಂತ್ರ್ಯದ 75ನೇ ವರ್ಷವಾಗಿದೆ. ನಾನು ಆ ಕೊಠಡಿಯನ್ನು ಪರೀಕ್ಷಿಸಲು ನಿರ್ಧರಿಸಿದೆ. ನಾವು ಈ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಕ ಕೇಂದ್ರವಾಗಿ ಬದಲಾಯಿಸಲು ಬಯಸುತ್ತೇವೆ ಎಂದು ಗೋಯೆಲ್ ಹೇಳಿದರು.
'ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ಸ್ಥಳವು ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಪ್ರವಾಸಿಗರು ನಮ್ಮ ಇತಿಹಾಸದ ಪ್ರತಿಬಿಂಬವನ್ನು ಕಾಣುವ ರೀತಿಯಲ್ಲಿ ನಾವು ಅದನ್ನು ನವೀಕರಿಸಲು ಉದ್ದೇಶಿಸಿದ್ದೇವೆ ಎಂದರು.