ನವದೆಹಲಿ: ಭಾರತೀಯ ಸೇನೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್ ಕ್ಷಿಪಣಿಯ ಹೊಸ ಸುಧಾರಿತ ಮಾದರಿಯ ಫ್ಲೈಟ್ ಟೆಸ್ಟ್ ಯಶಸ್ವಿಯಾಗಿದೆ. ಒಡಿಶಾದ ಚಾಂಡಿಪುರ್ ಎಂಬಲ್ಲಿಇಂದು ಮೊಟ್ಟಮೊದಲ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.
ಮಾರ್ಚ್ ತಿಂಗಳಲ್ಲಿ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರದೇಶದಲ್ಲಿ ಮಂಗಳವಾರ ದೇಶೀ ನಿರ್ಮಿತ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಇಂದು ಮಾನವ ರಹಿತ ಶತ್ರು ಏರ್ ಕ್ರಾಫ್ಟ್ ಹೊಡೆದುರುಳಿಸುವ ಪ್ರಯೋಗಕ್ಕೆ ಅಣಿಯಾದ ಆಕಾಶ್ ಪ್ರೈಂ ಕ್ಷಿಪಣಿ, ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಉದ್ದೇಶಿತ ಪಥದಲ್ಲಿದ್ದ ಏರ್ ಕ್ರಾಫ್ಟ್ ಧ್ವಂಸಗೊಳಿಸಿದೆ. ಸೋಮವಾರ ಸಂಜೆ ಈ ಏರ್ ಕ್ರಾಫ್ಟ್ ಪರೀಕ್ಷೆ ನಡೆಸಿ ಯಶ ಕಾಣಲಾಗಿದೆ.
"ಈಗಿರುವ ಆಕಾಶ್ ಕ್ಷಿಪಣಿಗೆ ಹೋಲಿಸಿದರೆ, ಆಕಾಶ್ ಪ್ರೈಮ್ ಸುಧಾರಿತವಾಗಿದ್ದು, ನಿಖರತೆಯುಳ್ಳ ಸ್ವದೇಶಿ ಆಕ್ಟೀವ್ RFಅನ್ವೇಷಕ ಹೊಂದಿದೆ. ಅತ್ಯಂತ ಕಡಿಮೆ ತಾಪಮಾನದ ವಾತಾವರಣ, ಸಮುದ್ರಮಟ್ಟದಿಂದ ಅತಿ ಎತ್ತರದ ಪರಿಸರದಲ್ಲೂ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತವೆ, ಭಾರತೀಯ ಸೇನೆಯ ವಾಯು ಕ್ಷಿಪಣಿ ವ್ಯವಸ್ಥೆಯಲ್ಲಿ ಅತ್ಯಂತ ಪ್ರಬಲವಾದ ಮತ್ತೊಂದು ಮೈಲಿಗಲ್ಲು ಇದಾಗಿದೆ" ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಇತರ ಪಾಲುದಾರರನ್ನು ಆಕಾಶ್ ಪ್ರೈಮ್ ಕ್ಷಿಪಣಿಯ ಯಶಸ್ವಿ ಪ್ರಯೋಗಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಆಕಾಶ್ ಕ್ಷಿಪಣಿ: ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋಣ್‌ಗಳು ಮತ್ತು ಮಾನವ ರಹಿತ ವಾಯುದಾಳಿಗಳನ್ನು ಸಮರ್ಥವಾಗಿ ಎದುರಿಸಿ ಅವುಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯ ಆಕಾಶ್ ಕ್ಷಿಪಣಿ ಹೊಂದಿದೆ. ನೆಲದಿಂದ ಆಗಸದೆಡೆಗೆ ಚಿಮ್ಮುವ ಭಾರತದ ಮಹತ್ವಾಕಾಂಕ್ಷೆಯ ಆಕಾಶ್ ಕ್ಷಿಪಣಿಯನ್ನು ಭಾರತೀಯ ಸೇನೆ, ವಾಯುಪಡೆ ಉಪಯೋಗಕ್ಕೆ ವಿನ್ಯಾಸಗೊಳಿಸಲಾಗಿದೆ.
40 ಕಿ.ಮೀ ದೂರದಲ್ಲೇ ದೊಡ್ಡ ವೈಮಾನಿಕ ದಾಳಿಯನ್ನು ತಡೆಯುವ ಸಾಮರ್ಥ್ಯದೊಂದಿಗೆ ಇದನ್ನು ನಿರ್ಮಿಸಲಾಗಿದೆ. ಶತ್ರು ಸೈನ್ಯದ ಅತಿ ವೇಗದ ವೈಮಾನಿಕ ದಾಳಿಯ ಗುರಿಯನ್ನು ಆಕಾಶ್ ಕ್ಷಿಪಣಿ ನಾಶಪಡಿಸುತ್ತದೆ. ಆಕಾಶ್, ಆಕಾಶ್ ಎಂಕೆ -2 ಕ್ಷಿಪಣಿಗಳು ಯಶಸ್ವಿಯಾಗಿದ್ದು ಅವುಗಳನ್ನು ಭಾರತೀಯ ಸೇನೆ ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಮೂರನೇ ಆವೃತ್ತಿಯಲ್ಲಿ ಸುಮಾರು 6 ಕ್ಷಿಪಣಿಗಳ ತಯಾರಿಕೆಗೆ ಅನುವು ಮಾಡಲಾಗಿದ್ದು, ಆಕಾಶ್ ಕ್ಷಿಪಣಿಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ (ಬಿಇಎಲ್) ತಯಾರಿಸುತ್ತಿದೆ. ಈ ಕ್ಷಿಪಣಿ ತಯಾರಿಕೆಗಾಗಿ ಕನಿಷ್ಠ 3,600 ಕೋಟಿ ರು. ವ್ಯಯಿಸಲಾಗುತ್ತದೆ. ಆರಂಭದಲ್ಲಿ ಮೂರನೇ ಆವೃತ್ತಿ ಪ್ರಯೋಗ ವಿಫಲವಾಗಿತ್ತು. ಆದರೆ, ಈಗ ಸುಧಾರಣೆಗೊಂಡು ಆಕಾಶ್ 3 ಹಾಗೂ ಆಕಾಶ್ ಪ್ರೈಂ ಎರಡು ಯಶಸ್ವಿಯಾಗಿವೆ.
ಆಕಾಶ್ ಕ್ಷಿಪಣಿ ವ್ಯವಸ್ಥೆ ವಿಶೇಷಗಳು:
* 25-40 ಕಿ.ಮೀ. ವ್ಯಾಪ್ತಿಯಲ್ಲಿ 20 ಕಿ.ಮೀ. ಎತ್ತರಕ್ಕೆ ಹಾರಿ ವೈರಿ ವಿಮಾನಗಳನ್ನು ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ.
* ಸುಮಾರು 32 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸೇನೆಗೆ ಸೇರ್ಪಡೆ ಮಾಡಲಾಗಿದೆ.
* ಎರಡು ಮೂರು ಟಾರ್ಗೆಟ್ ಗಳನ್ನು ಏಕ ಕಾಲಕ್ಕೆ ನಿಭಾಯಿಸಬಲ್ಲ ವ್ಯವಸ್ಥೆ ಹೊಂದಿದೆ.
* ಸುಸಜ್ಜಿತ ರೆಡಾರ್ ವ್ಯವಸ್ಥೆ ಜೊತೆಗೆ ಆಕಾಶ್ ಕ್ಷಿಪಣಿ ನಿರ್ವಹಿಸುವುದರಿಂದ ನಿಖರ ಗುರಿ ತಲುಪುತ್ತದೆ. * ಡಿಆರ್ ಡಿಒ ನಿಂದ ವಿನ್ಯಾಸ ಹಾಗೂ ಅಭಿವೃದ್ಧಿ ಹೊಂದಿದ ವ್ಯವಸ್ಥೆ ಇದಾಗಿದೆ.
* ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸೇನೆಯ ಅಗತ್ಯಕ್ಕೆ ತಕ್ಕಂತೆ ಆಕಾಶ್ ಕ್ಷಿಪಣಿ ರೂಪಿಸಿದೆ.
* ಬಿಇಎಲ್, ಇಸಿಐಎಲ್, ಎಚ್‌ಎಎಲ್, ಟಾಟಾ ಪವರ್ ಎಸ್ ಇಡಿ ಹಾಗೂ ಎಲ್ ಅಂಡ್ ಟಿ ಕೂಡಾ ಕ್ಷಿಪಣಿ ನಿರ್ಮಾಣದಲ್ಲಿ ಕೈ ಜೋಡಿಸಿವೆ.
* ಒಟ್ಟಾರೆ ಭಾರತದ 61 ಪಬ್ಲಿಕ್ ಹಾಗೂ ಪ್ರೈವೇಟ್ ವಲಯದ ಸಂಸ್ಥೆಗಳು ಆಕಾಶ್ ಕ್ಷಿಪಣಿ ವ್ಯವಸ್ಥೆ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ.