ಕಣ್ಣೂರು: ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್ ಜತೆ ಸಂಪರ್ಕ ಹೊಂದಿರುವ ಕೇರಳದ ಮೂರು ಮಂದಿ ವಿರುದ್ಧ ದೆಹಲಿಯ ಎನ್‍ಐಎ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮಲಪ್ಪುರಂ ನಿವಾಸಿ ಮಹಮ್ಮದ್ ಅಮೀನ್, ಕಣ್ಣೂರು ನಿವಾಸಿ ಮುಶಾಬ್ ಅನ್ವರ್, ಕೊಲ್ಲಂ ಓಚ್ಚಿರ ನಿವಾಸಿ ರಹೀಸ್ ರಶೀದ್ ಎಂಬವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಕೇರಳದಿಂದ ಐಸಿಸ್‍ಗೆ ಜನರನ್ನು ರಿಕ್ರೂಟ್ ನಡೆಸುವುದು, ಸಾಮಾಜಿಕ ಜಾಲ ತಾಣ ಟೆಲಿಗ್ರಾಂ. ಹ್ಯೂಪ್, ಇನ್‍ಸ್ಟಾಗ್ರಾಂ ಮೂಲಕ ಐಸಿಸ್ ಆಶಯಗಳನ್ನು ಪ್ರಚಾರಪಡಿಸುವುದು, ಐಸಿಸ್‍ನ ಚಟುವಟಿಕೆಗಳನ್ನು ಏಕೀಕರಿಸುವುದು ಮುಂತಾದ ಕೃತ್ಯಗಳಲ್ಲಿ ತೊಡಗಿರುವುದನ್ನು ಎನ್‍ಐಎ ಪತ್ತೆಹಚ್ಚಿತ್ತು.
ಇವರಲ್ಲಿ ಮಹಮ್ಮದ್ ಅಮೀನ್ ಕಳೆದ ವರ್ಷ ಕಾಶ್ವಮೀರಕ್ಕೆ ತೆರಳಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ರಹೀಸ್‍ರಶೀದ್ ಕಾಶ್ಮೀರ ನಿವಾಸಿ ಮಹಮ್ಮದ್ ವಖಾರ್ ಲೋನ್ ಎಂಬಾತನೊಂದಿಗೆ ಸೇರಿ ಭಯೋತ್ಪಾದನಾ ಕೃತ್ಯಗಳಿಗೆ ಹಣ ಹೊಂದಾಣಿಕೆ ನಡೆಸಿರುವುದಾಗಿಯೂ ಪತ್ತೆಹಚ್ಚಲಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಹಲವರಿಂದ ಹಣ ಸಂಗ್ರಹಿಸುವುದರ ಜತೆಗೆ ಯುವಕರನ್ನು ಐಸಿಸ್‍ಗೆ ರಿಕ್ರೂಟ್ ನಡೆಸುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಇವರು ಸಂಚು ರೂಪಿಸಿರುವುದನ್ನು ಪತ್ತೆಹಚ್ಚಲಾಗಿದೆ.