ನವದೆಹಲಿ: ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಗೆ ಇರುವ ಅಧಿಕಾರವನ್ನು ಶಾಸಕಾಂಗದ ಕಾಯ್ದೆ ಮೂಲಕವೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ಸೂರಜ್ ಇಂಡಿಯಾ ಟ್ರಸ್ಟ್‌ನ ಅಧ್ಯಕ್ಷ ರಾಜೀವ್ ದಯ್ಯಾ ₹25 ಲಕ್ಷ ಠೇವಣಿ ಇರಿಸದ ಕಾರಣ ಅವರು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ.
64 ಬಾರಿ ಸಾರ್ವಜಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಜೊತೆಗೆ, ಪದೇ ಪದೇ ನ್ಯಾಯಾಲಯದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಕಾರಣಕ್ಕಾಗಿ ರಾಜೀವ್ ದಯ್ಯಾಗೆ ಅವರಿಗೆ ಸುಪ್ರೀಂ ಕೋರ್ಟ್ 2017ರಲ್ಲಿ ₹25 ಲಕ್ಷ ದಂಡ ವಿಧಿಸಿತ್ತು. ಆದರೆ, ಈ ತೀರ್ಪನ್ನು ವಾಪಸ್ ಪಡೆಯುವಂತೆ ಕೋರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ನ್ಯಾಯಪೀಠ, ದಯ್ಯಾ ಅವರು ನ್ಯಾಯಾಲಯ, ಆಡಳಿತ ಸಿಬ್ಬಂದಿ ಮತ್ತು ರಾಜ್ಯ ಸರ್ಕಾರದ ಕಣ್ಣಿಗೆ ಮಣ್ಣು ಎರಚಿದ್ದಾರೆ' ಎಂದು ಹೇಳಿತು.
'ಈ ಪ್ರಕರಣದಲ್ಲಿ ದಯ್ಯಾ ನ್ಯಾಯಾಂಗ ನಿಂದನೆ ಮಾಡಿರುವುದು ಸ್ಪಷ್ಟವಾಗಿದೆ. ಅಂಥವರನ್ನು ತಪ್ಪಿತಸ್ಥರೆಂದು ನಾವು ಭಾವಿಸುತ್ತೇವೆ. ನ್ಯಾಯಾಲಯವನ್ನೇ ಹಗರಣದ ಕೇಂದ್ರವಾಗಿ ಮಾಡುವ ಈ ವ್ಯಕ್ತಿಯ ಕ್ರಮವನ್ನು ಸಮರ್ಥಿಸಲಾಗದು' ಎಂದು ನ್ಯಾಯಪೀಠ ಹೇಳಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.7ರಂದು ಶಿಕ್ಷೆ ಪ್ರಕಟಿಸಲಾಗುತ್ತಿದ್ದು ಅಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಪೀಠ ದಯ್ಯಾ ಅವರಿಗೆ ಸೂಚಿಸಿದ್ದು, ಈ ಸಂಬಂಧ ನೋಟಿಸ್ ಜಾರಿಗೊಳಿಸಿದೆ.