ದುಬೈ: ಕೊರೋನಾ ಎರಡನೇ ಅಲೆಯಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ಇದೀಗ ದುಬೈನಲ್ಲಿ ನಡೆಸಲಾಗುತ್ತದೆ. ಆದರೆ ದುಬೈನಲ್ಲೂ ಐಪಿಎಲ್ ಗೆ ಕೊರೋನಾ ಕಾಟ ಶುರುವಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ನಟರಾಜನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಅವರ ಸಂಪರ್ಕಕ್ಕೆ ಬಂದ ಇತರ ಆರು ಆಟಗಾರರ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಇಂದು ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಪಂದ್ಯ ನಡೆಯಬೇಕಿತ್ತು. ಆದರೆ ನಟರಾಜನ್ ಗೆ ಕೊರೋನಾ ಪಾಸಿಟಿವ್ ಬಂದಿರುವುದರಿಂದ ಪಂದ್ಯ ನಡೆಯುವುದು ಅನುಮಾನವಾಗಿದೆ. ಇನ್ನು ಹೈದರಾಬಾದ್ ಆಟಗಾರರು ಮತ್ತು ಸಿಬ್ಬಂದಿಯ ಆರ್ ಟಿಪಿಸಿಆರ್ ವರದಿ ಬಂದ ನಂತರ ಪಂದ್ಯ ನಡೆಯಬೇಕಾ ಅಥವಾ ಮುಂದೂಡುವ ಬಗ್ಗೆ ಸ್ಪಷ್ಟನೆ ಸಿಗಲಿದೆ.
ಸದ್ಯ ನಟರಾಜನ್ ಸಂಪರ್ಕಕ್ಕೆ ಬಂದಿದ್ದ ಆಟಗಾರ ವಿಜಯ್ ಶಂಕರ್, ತಂಡದ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್, ತಂಡದ ವೈದ್ಯೆ ಅಂಜನಾ ವನ್ನನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸಾಮಿ ಗಣೇಶನ್ ಎಂದು ಗುರುತಿಸಲಾಗಿದೆ.