ನವದೆಹಲಿ: ಇದು ರೀಸೈಕಲ್ ಜಮಾನ. ಯಾವುದೇ ವಸ್ತುವನ್ನು ಮರುಬಳಕೆ ಮಾಡುವ ಮೂಲಕ ತ್ಯಾಜ್ಯದ ರಾಶಿ ಸೃಷ್ಟಿಯಾಗುವುದನ್ನು ತಪ್ಪಿಸಬಹುದು. ಅದರಲ್ಲೂ ಗೌರಯುತವಾದ ಸೇನಾ ಸಮವಸ್ತ್ರ ತ್ಯಾಜ್ಯ ಸೇರದಂತೆ ಮರುಬಳಕೆ ಮಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸುವಂಥ ಪವಿತ್ರ ಕೆಲಸದಲ್ಲಿ ಎನ್ ಜಿ ಒ ಸಂಘಟನೆಯೊಂದು ನಿರತವಾಗಿದೆ. ಅಲ್ಲದೆ ನಮ್ಮ ದೇಶದ ಸೇನೆಯ ಸಮವಸ್ತ್ರ ಉಗ್ರರ ಕೈಗೆ ಸೇರಿ ದುರುಪಯೋಗವಾಗುವುದನ್ನೂ ತಪ್ಪಿಸಬಹುದು.
'ವರ್ದಿ ಕಾ ಸಮ್ಮಾನ್' ಎಂಬ ಹೆಸರಿನ ಸಂಘಟನೆಯನ್ನು ಹುಟ್ಟು ಹಾಕಿದ್ದು ಭಾರತೀಯ ಸೇನೆಯಿಂದ ನಿವೃತ್ತರಾದ ಅಧಿಕಾರಿ ಎನ್ನುವುದು ವಿಶೇಷ. ಅವರ ಹೆಸರು ಕರ್ನಲ್ ಅಶಿಮ್ ಕೊಹ್ಲಿ. ಅವರು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು.
ಸೇನಾ ಘಟಕಗಳಿಂಡ ವರ್ಷಕ್ಕೆ ಅದೆಷ್ಟೋ ಪ್ರಮಾಣದ ಸಮವಸ್ತ್ರಗಳು ನಾನಾ ಕಾರಣಕ್ಕೆ ನಿರುಪಯುಕ್ತವಾಗುತ್ತವೆ. ಹಲವು ಸೇನಾಘಟಕಗಳಿಂದ ನಿರುಪಯುಕ್ತ ಸಮವಸ್ತ್ರಗಳನ್ನು 'ವರ್ದಿ ಕಾ ಸಮ್ಮಾನ್' ಸಂಘಟನೆ ಸ್ವೀಕರಿಸುತ್ತದೆ.
ಸಂಘಟನೆಗಳಿಗೆ ಸೇರಿದ ಪುಟ್ಟ ಘಟಕದಲ್ಲಿ 16 ಮಂದಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಈ ಸೇನಾವಸ್ತ್ರಗಳಿಂದ ಮಾಸ್ಕ್, ಬ್ಯಾಗು, ಪೌಚ್ ಗಳು, ಬ್ಯಾಕ್ ಪ್ಯಾಕ್ ಗಳು, ಬಾಟಲ್ ಕವರ್ ಗಳನ್ನು ಸಿದ್ಧಪಡಿಸುತ್ತಾರೆ.
ಸೇನೆ, ನೇವಿ ಮತ್ತು ವಾಯುಪಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ಸೈನಿಕರು ತಮ್ಮ ಸಮವಸ್ತ್ರವನ್ನು ಸಂಘತನೆಗೆ ದೇಣಿಗೆಯಾಗಿ ನೀಡಬಹುದು.
ಪಠಾಣ್ ಕೋಟ್ ದಾಳಿ ನಡೆದ ಸಂದರ್ಭ ಉಗ್ರರು ಭಾರತೀಯ ಸೈನಿಕರ ಸಮವಸ್ತ್ರ ಧರಿಸಿ ಬಂದಿದ್ದನ್ನು ಉಲ್ಲೇಖಿಸುವ ಅಶಿಮ್ ಕೊಹ್ಲಿ ಸಮವಸ್ತ್ರ ದುರುಪಯೋಗ ಆಗುವುದನ್ನು ತಪ್ಪಿಸಲು ಸಮವಸ್ತ್ರದ ಮರುಬಳಕೆ ಅತ್ಯುತ್ತಮ ಮಾರ್ಗ ಎನ್ನುತ್ತಾರೆ.
ದೇಶದೆಲ್ಲೆಡೆ ಇರುವ ಸೇನಾನೆಲೆಗಳಿಂದ ಸಮವಸ್ತ್ರಗಳನ್ನು 'ವರ್ದಿ ಕಾ ಸಮ್ಮಾನ್' ಸಂಘಟನೆಗೆ ನೀಡಬಹುದು. ಎಲ್ಲಾ ಸಮವಸ್ತ್ರಗಳನ್ನು ಸಂಘಟನೆಯ ಸದಸ್ಯರು ದೆಹಲಿಯ ಖಾನ್ ಪುರ ದಲ್ಲಿರುವ ಸಂಘಟನೆಯ ಘಟಕ್ಕೆ ತರುತ್ತಾರೆ.
ಸಮವಸ್ತ್ರಗಳನ್ನು ಮೊದಲು ಶುಚಿಗೊಳಿಸಿ, ಸ್ಯಾನಿಟೈಸ್ ಮಾಡಲಾಗುತ್ತದೆ. ಅದರ ಮೇಲಿರುವ ಪದಕಗಳು, ಜೇಬುಗಳು, ಸ್ಟಾರ್ ಗಳನ್ನು ತೆಗೆದು ಹಾಕಲಾಗುತ್ತದೆ. ಬಟ್ಟೆ ಮಾಸಿದ್ದರೆ ಡೈ ಮಾಡಲಾಗುತ್ತದೆ.
ಈ ಕಾರ್ಖಾನೆಯಲ್ಲಿ ತಯಾರಾಗುವ ಉತ್ಪನ್ನಗಳಲ್ಲಿ ಹೆಚ್ಚಿನ ಪಾಲು ಮತ್ತೆ ಸೇನೆಗೆ ಸರಬರಾಜಾಗುತ್ತದೆ.