ನವದೆಹಲಿ: ಶಿಕ್ಷೆ ವಿಧಿಸುವುದೇ ನ್ಯಾಯ ದೊರಕಿಸಿಕೊಡುವ ಏಕೈಕ ಮಾರ್ಗವಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಕಾನೂನನ್ನು ಸಮಾನವಾಗಿ ಅನ್ವಯಿಸುವ ಸಾಮಾಜಿಕ ವಿಧಾನಗಳಲ್ಲಿ ವಿನಾಯಿತಿಗಳಿರುವುದರಿಂದ ಶಿಕ್ಷೆಯೊಂದೇ ನ್ಯಾಯ ನೀಡುವ ಮಾರ್ಗ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿವರಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು, ಅಪರಾಧದ ಸ್ವರೂಪದ ಆಧಾರದಲ್ಲಿ ಹಾಗೂ ಪ್ರಕರಣವನ್ನು ಎರಡೂ ಕಡೆಯವರು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದರೆ, ಸಂತ್ರಸ್ತರು ಇಚ್ಛೆಯಿಂದ ಇದಕ್ಕೆ ಒಪ್ಪಿಗೆ ನೀಡಿದ್ದರೆ ಹೈಕೋರ್ಟ್ ತನ್ನ ಅಂತರ್ಗತ ಅಧಿಕಾರವನ್ನು, ಅಂದರೆ ಸೆಕ್ಷನ್ 482ರ ಕ್ರಿಮಿನಲ್ ಪ್ರೊಸೀಜರ್ ಕೋಡ್ ಬಳಸಿಕೊಂಡು ಅಂತಹ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಬಹುದು ಎಂದು ಹೇಳಿದೆ.
ಸೆಕ್ಷನ್ 482 ಅಡಿಯಲ್ಲಿ ಅಸಾಧಾರಣ ಅಧಿಕಾರವನ್ನು ಚಲಾಯಿಸುವ ಮೂಲಕ ನ್ಯಾಯ ವ್ಯವಸ್ಥೆಯನ್ನು ಭದ್ರಪಡಿಸಲು ಹೈಕೋರ್ಟ್‌ಗೆ ಅನುಮತಿಯಿದೆ ಎಂದು ಪೀಠ ತಿಳಿಸಿದೆ.
ಆದರೆ ಗಂಭೀರ ಅಪರಾಧಗಳ ಸಂದರ್ಭದಲ್ಲಿ, ನೈತಿಕ ವಿಷಯಗಳನ್ನು ಒಳಗೊಂಡಿರುವ ಅಥವಾ ನೈತಿಕ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರುವಂಥ ಅಪರಾಧಗಳನ್ನು ಎರಡು ವ್ಯಕ್ತಿಗಳು ಅಥವಾ ಗುಂಪುಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಇಂಥ ಅಪರಾಧಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವುದರಿಂದ ಇವುಗಳನ್ನು ಪರಿಗಣಿಸಲೇಬೇಕಾಗುತ್ತದೆ ಎಂಬುದನ್ನು ಪೀಠ ಒತ್ತಿ ಹೇಳಿದೆ.
ಇಂಥ ಸಂದರ್ಭಗಳಲ್ಲಿ ಹೈಕೋರ್ಟ್ ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಅಪರಾಧಿ ಶಿಕ್ಷೆಗೆ ಒಳಪಡದಿದ್ದರೂ ಅಪರಾಧ ಪ್ರಕರಣ ನ್ಯಾಯ ವ್ಯವಸ್ಥೆಯ ಉದ್ದೇಶಕ್ಕೆ ವಿರುದ್ಧವಾಗಿರುವಂತಿಲ್ಲ ಎಂಬುದನ್ನು ಖಚಿತಪಡಿಸಬೇಕು ಎಂದು ತಿಳಿಸಿದೆ.
ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವ ಪ್ರಕ್ರಿಯೆ, ಸಮಾಜಕ್ಕೆ ಅಥವಾ ಸಮುದಾಯಕ್ಕೆ ತಪ್ಪು ಸಂದೇಶ ನೀಡಬಹುದು. ಜೊತೆಗೆ ಇನ್ನಷ್ಟು ನಿರ್ಲಜ್ಜ ಅಥವಾ ವೃತ್ತಿಪರ ಅಪರಾಧಗಳಿಗೆ ಉತ್ತಮ ಅವಕಾಶ ಒದಗಿಸಿಕೊಡಬಹುದು. ಹೀಗಾಗಿ ಅಪರಾಧ ಪ್ರಕರಣಗಳನ್ನು ರದ್ದುಗೊಳಿಸುವ ಕುರಿತು ಸಾಕಷ್ಟು ಜಾಗರೂಕತೆಯಿಂದ ಇರಬೇಕು. ರದ್ದುಪಡಿಸಬಲ್ಲ ಅಪರಾಧ ಪ್ರಕರಣಗಳನ್ನು ಅಳೆದುತೂಗಬೇಕು ಎಂದು ಸಲಹೆ ನೀಡಿದೆ.
'ಅಪರಾಧಿ ಕಾನೂನಿನಿಂದ ತಪ್ಪಿಸಿಕೊಳ್ಳಬಾರದು' ಎಂಬುದನ್ನು ಒತ್ತಿಹೇಳಿರುವ ಪೀಠ, ಸಿಆರ್‌ಪಿಸಿ ಸೆಕ್ಷನ್ 482 ಅಡಿಯಲ್ಲಿ ಹೈಕೋರ್ಟ್ ಹಾಗೂ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಅಧಿಕಾರ ಚಲಾಯಿಸಬೇಕು. ಆದರೆ ಕ್ರಿಮಿನಲ್ ವಿಚಾರಣೆಗಳನ್ನು ರದ್ದುಗೊಳಿಸುವ ಸಂದರ್ಭ ಎಚ್ಚರದಿಂದಿರಬೇಕು ಎಂದು ಸೂಚಿಸಿದೆ.
ಮಧ್ಯ ಪ್ರದೇಶ ಹಾಗೂ ಕರ್ನಾಟಕ ಹೈಕೋರ್ಟ್ ತೀರ್ಪುಗಳ ವಿರುದ್ಧದ ಎರಡು ಮೇಲ್ಮನವಿಗಳನ್ನು ಬುಧವಾರ ಕೈಗೆತ್ತಿಕೊಂಡಿದ್ದ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ನ್ಯಾಯಾಲಯಗಳ ಅಧಿಕಾರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ:
ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಿಗೆ ಇರುವ ಅಧಿಕಾರವನ್ನು ಶಾಸಕಾಂಗದ ಕಾಯ್ದೆ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಲಯದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸೂರಜ್ ಇಂಡಿಯಾ ಟ್ರಸ್ಟ್ ಅಧ್ಯಕ್ಷ ರಾಜೀವ್ ದಯ್ಯಾ ಅವರಿಗೆ 2017ರಲ್ಲಿ ಸುಪ್ರೀಂ ಕೋರ್ಟ್ 25 ಲಕ್ಷ ರೂ ದಂಡ ವಿಧಿಸಿತ್ತು. ಈ ತೀರ್ಪನ್ನು ವಾಪಸ್ ಪಡೆಯುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಅರ್ಜಿ ವಿಚಾರಣೆ ನಡೆಸಲಾಗಿದ್ದು, ನ್ಯಾಯಾಲಯ ಈ ಹೇಳಿಕೆ ನೀಡಿದೆ.
ದಯ್ಯಾ ಅವರು ತಪ್ಪಿತಸ್ಥರಾಗಿದ್ದಾರೆ. ನ್ಯಾಯಾಲಯವನ್ನೇ ಹಗರಣ ಕೇಂದ್ರವಾಗಿ ಮಾಡುವ ವ್ಯಕ್ತಿಯ ಕ್ರಮವನ್ನು ಎಂದಿಗೂ ನ್ಯಾಯಾಲಯ ಸಮರ್ಥಿಸಲಾಗದು. ನ್ಯಾಯಾಲಯಗಳಿಗೆ ಇರುವ ಅಧಿಕಾರವನ್ನು ಶಾಸಕಾಂಗದ ಯಾವ ಕಾಯ್ದೆಯೂ ಕಿತ್ತುಕೊಳ್ಳಲಾಗದು. ಶಿಕ್ಷಿಸುವ ಸಂಪೂರ್ಣ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಎಂ.ಎಂ. ಸುಂದ್ರೇಶ್ ಅವರನ್ನೊಳಗೊಂಡ ಪೀಠ ಹೇಳಿದೆ.