ಹೂಸ್ಟನ್: ಕೊರೋನ ಸೋಂಕಿನಿಂದ ಬಳಲುತ್ತಿರುವ , ಟೈಪ್ 1 ಮಧುಮೇಹ ರೋಗವಿರುವ 40 ವರ್ಷ ಮೀರಿದ ವಯಸ್ಕರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೇ ರೀತಿಯ ಸಮಸ್ಯೆಯಿಂದ ಬಳಲುವ ಮಕ್ಕಳಿಗಿಂತ 7 ಪಟ್ಟು ಅಧಿಕವಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಮಧುಮೇಹ ರೋಗವಿರುವ ವ್ಯಕ್ತಿಗಳು, ಅದರಲ್ಲೂ ಮುಖ್ಯವಾಗಿ 40 ವರ್ಷ ಮೀರಿದವರು ಕೊರೋನ ಸೋಂಕಿಗೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗುವ ಅಪಾಯ ಹೆಚ್ಚಿದೆ ಎಂದು 'ಎಂಡೋಕ್ರೈನ್ ಸೊಸೈಟೀಸ್ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರಿನಾಲಜಿ ಆಯಂಡ್ ಮೆಟಬಾಲಿಸಂ'ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೊರೋನ ಸೋಂಕಿಗೆ ಒಳಗಾದ ಮಕ್ಕಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ತೀವ್ರ ಸಮಸ್ಯೆ ಕಾಡುವುದು ಅಪರೂಪವಾಗಿದೆ ಮತ್ತು ಹಿರಿಯ ವಯಸ್ಕರಲ್ಲಿ ಶ್ವಾಸಕೋಶದ ಸಮಸ್ಯೆ ತೀವ್ರಗೊಂಡು ಸಾವಿಗೀಡಾಗುವ ಅಪಾಯ ಹೆಚ್ಚಿದೆ. 40 ವರ್ಷ ಮೀರಿದ ವ್ಯಕ್ತಿಗಳು ಟೈಪ್-1 ಮಧುಮೇಹ ರೋಗದ ಜೊತೆಗೆ ಕೊರೋನ ಸೋಂಕಿಗೆ ಒಳಗಾದರೆ ಅಪಾಯ ಹೆಚ್ಚಿದೆ.ಆದರೆ ಮಕ್ಕಳು ಮತ್ತು ಯುವಕರಲ್ಲಿ ಸೋಂಕಿನ ಸೌಮ್ಯಲಕ್ಷಣದ ಜೊತೆಗೆ ರೋಗದ ಮುನ್ಸೂಚನೆಯ ಪ್ರಮಾಣ ಹೆಚ್ಚಿದೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಡಾ. ಕಾರ್ಲಾ ಡೆಮೆಟೆರ್ಕೊ-ಬರ್ಗ್ರೆನ್ ಹೇಳಿದ್ದಾರೆ.
ಟೈಪ್ 1 ಮಧುಮೇಹ ಮತ್ತು ಕೊರೋನ ಸೋಂಕಿನಿಂದ ಬಳಲುತ್ತಿರುವವರಿಗೆ ವಯಸ್ಸು ಮತ್ತು ರೋಗ ನಿರೋಧಕತೆ(ಪ್ರತಿರಕ್ಷಣೆ)ಯನ್ನು ಆಧರಿಸಿ ಚಿಕಿತ್ಸೆ ಒದಗಿಸುವ ಅಗತ್ಯವನ್ನು ಈ ಅಧ್ಯಯನ ದೃಢಪಡಿಸಿದೆ . ಕೊರೋನ ಸೋಂಕಿಗೆ ಒಳಗಾಗುವ ಅಪಾಯವನ್ನು ನಿವಾರಿಸಲು ಮಾಸ್ಕ್ ಧಾರಣೆ, ಲಸಿಕೆ ಪಡೆಯುವುದು ಮುಂತಾದ ಸಾರ್ವಜನಿಕ ಆರೋಗ್ಯ ಸಲಹೆಗಳನ್ನು ಪಾಲಿಸಬೇಕು ಎಂದವರು ಹೇಳಿದ್ದಾರೆ.
ಅಮೆರಿಕದ 56 ಮಧುಮೇಹ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ 767 ರೋಗಿಗಳ(ಟೈಪ್ 1 ಮಧುಮೇಹದ ಜೊತೆಗೆ ಕೊರೋನ ಸೋಂಕು ಬಾಧಿತರು) ಅಂಕಿಅಂಶವನ್ನು ಪರಿಶೀಲಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ. ಇವರಲ್ಲಿ 54% ಮಂದಿ 18 ಅಥವಾ ಅದಕ್ಕೂ ಕೆಳ ವಯಸ್ಸಿನವರು, 32% ಮಂದಿ 19ರಿಂದ 40 ವಯಸ್ಸಿನವರು ಮತ್ತು 40% ಮಂದಿ 40ಕ್ಕಿಂತ ಹೆಚ್ಚಿನ ವಯಸ್ಸಿನವರು.
ಇವರಲ್ಲಿ 40ಕ್ಕಿಂತ ಹೆಚ್ಚಿನ ವಯಸ್ಸಿನವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮಕ್ಕಳಿಗೆ ಹೋಲಿಸಿದರೆ 7 ಪಟ್ಟು ಅಧಿಕವಾಗಿದೆ. ಈ ವಯೋಮಾನದವರಲ್ಲಿ 3 ಮಂದಿ ಮೃತಪಟ್ಟಿದ್ದರೆ 18 ಮತ್ತು ಕೆಳಹರೆಯದವರಲ್ಲಿ ಒಬ್ಬರೂ ಮೃತಪಟ್ಟಿಲ್ಲ, 19ರಿಂದ 40 ವಯೋಮಾನದವರಲ್ಲಿ 2 ಮಂದಿ ಮೃತರಾಗಿದ್ದಾರೆ. 40ಕ್ಕಿಂತ ಅಧಿಕ ವಯಸ್ಸಿನವರಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುವ ಅಪಾಯ ಹೆಚ್ಚು. ಬೊಜ್ಜು, ಅಧಿಕ ರಕ್ತದೊತ್ತಡ, ಹೃದ್ರೋಗ, ಕಿಡ್ನಿ ಕಾಯಿಲೆಗೆ ತುತ್ತಾಗುವ ಸಾಧ್ಯತೆಯೂ ಅಧಿಕವಾಗಿದೆ. ವಯಸ್ಕರಲ್ಲಿ ಕೊರೋನ ಸೋಂಕಿನ ಅಪಾಯದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗಿದೆ ಎಂದು ಡಾ. ಕಾರ್ಲಾ ಡೆಮೆಟೆರ್ಕೊ-ಬರ್ಗ್ರೆನ್ ಹೇಳಿದ್ದಾರೆ.