ಹೈದರಾಬಾದ್: ತೆಲಂಗಾಣ ಸಚಿವ ಕೆ. ಟಿ. ರಾಮರಾವ್ ಓರ್ವ ಉತ್ತಮ ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮೂಲಕ ಅನೇಕ ಘಟನೆಗಳನ್ನು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಜಗ್ಗಿತಲ ಪಟ್ಟಣದ 12 ವರ್ಷದ ನ್ಯೂಸ್ ಪೇಪರ್ ಹುಡುಗ ಸಚಿವರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಬೈಸಿಕಲ್ ಮೂಲಕ ಹುಡುಗ ನ್ಯೂಸ್ ಪೇಪರ್ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋವನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದು, ಇದೇ ವಿಡಿಯೋ ಸಚಿವರು ಗಮನ ಸೆಳೆದಿದೆ.
ವಿಡಿಯೋದಲ್ಲಿ ಏನಿದೆ?
ಹುಡುಗ ಬೈಸಿಕಲ್ ನಿಲ್ಲಿಸಿ ಪೇಪರ್ ಹಾಕುವಾಗ ಬೈಕ್ ಮೇಲೆ ಬರುವ ವ್ಯಕ್ತಿ ಹುಡುಗನ ಹತ್ತಿರ ಬೈಕ್ ನಿಲ್ಲಿಸಿ ನಿನ್ನ ಶಾಲೆ ಯಾವುದು ಎಂದು ಪ್ರಶ್ನಿಸುತ್ತಾರೆ. ಸರ್ಕಾರಿ ಹೈಸ್ಕೂಲ್ ಎಂದು ಉತ್ತರಿಸುತ್ತಾನೆ. ಅದು ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದಾಗ ಎಲ್ಲಿ ಅಂದ್ರೆ ಹಳೇ ಬಸ್ ನಿಲ್ದಾಣ ಬಳಿ ಇದೆ ಎಂದು ಹುಡುಗ ಉತ್ತರಿಸುತ್ತಾನೆ. ಈ ವಯಸ್ಸಲ್ಲೇಕು ಪೇಪರ್ ಹಾಕುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಯಾಕೆ ಪೇಪರ್ ಹಾಕಬಾರದಾ ಎಂದು ಹುಡುಗನೇ ಮರು ಪ್ರಶ್ನಿಸುತ್ತಾನೆ. ಹಾಗೇನು ಇಲ್ಲ, ನೀನು ಮಾಡುತ್ತಿರುವುದು ಒಳ್ಳೆಯ ಕೆಲಸ. ಆದರೆ, ಓದಿಕೊಳ್ಳುವ ವಯಸ್ಸಲ್ಲಿ ಈ ರೀತಿ ಕೆಲಸ ಮಾಡುತ್ತೀದ್ದೀಯಲ್ಲ ಅದಕ್ಕೆ ಕೇಳಿದೆ ಎಂದು ಬೈಕ್ ಸವಾರ ಹೇಳುತ್ತಾರೆ. ಅದಕ್ಕೆ ಉತ್ತರಿಸುವ ಹುಡುಗ ಚೆನ್ನಾಗಿ ಓದುತ್ತೇನೆ ಹಾಗೇ ಕೆಲಸಾನೂ ಮಾಡುತ್ತೇನೆ ಅದರಲ್ಲೇನು ತಪ್ಪಿದೆ ಎನ್ನುತ್ತಾನೆ. ತಪ್ಪೇನು ಇಲ್ಲ ಓದಿಕೊಳ್ಳುವ ವಯಸ್ಸಲ್ಲಿ ನೀನು ಇಷ್ಟ ಕಷ್ಟಪಡುತ್ತಿದ್ದೀಯಲ್ಲ ಅದು ನನಗೆ ಇಷ್ಟವಾಯಿತು ಅದಕ್ಕೆ ಕೇಳಿದೆ ಎನ್ನುತ್ತಾರೆ. ಈಗ ಕಷ್ಟಪಟ್ಟರೆ ಏನಾದರೂ ಸಾಧಿಸಬಹುದು ಎಂದು ಹೇಳುತ್ತಾನೆ. ಬಳಿಕ ಆತನ ಹೆಸರು ಕೇಳಿ ಬೈಕ್ ಸವಾರ ಧನ್ಯವಾದ ತಿಳಿಸಿ ಅಲ್ಲಿಂದ ಹೊರಡುತ್ತಾರೆ.
ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಕೆ.ಟಿ. ರಾಮರಾವ್, ಜಗ್ಗಿತಲ ಪಟ್ಟಣದ ಈ ವಿಡಿಯೋ ನಿಜಕ್ಕೂ ನನಗೆ ಇಷ್ಟವಾಯಿತು. ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ ಶ್ರೀ ಪ್ರಕಾಶ್ ಅವರ ನಂಬಿಕೆ, ಚಿಂತನೆ ಮತ್ತು ಅಭಿವ್ಯಕ್ತಿಯ ಸ್ಥಿರತೆ ಮತ್ತು ಸ್ಪಷ್ಟತೆ ನನಗೆ ನಿಜಕ್ಕೂ ಇಷ್ಟವಾಯಿತು ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಹುಡುಗನ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹುಡುಗನ ಕೆಲಸ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರನ್ನು ನೆನಪಿಸುತ್ತದೆ. ಅವರು ಕೂಡ ಚಿಕ್ಕ ವಯಸ್ಸಿನಲ್ಲಿ ಪೇಪರ್ ಬಾಯ್ ಆಗಿ ಕೆಲಸ ಮಾಡಿ ವಿಜ್ಞಾನಿಯಾಗಿ, ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ಇಂದಿಗೂ ಅಸಂಖ್ಯಾತರ ಸ್ಫೂರ್ತಿಯಾಗಿಯೇ ಉಳಿದಿದ್ದಾರೆ.