ಕಾಸರಗೋಡು: ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ರಾಜ್ಯದ ಕ್ರೀಡಾ ಹಾಸ್ಟೆಲ್ ಗಳಲ್ಲಿ ಸುಧಾರಿತ ತರಬೇತಿ ಸೌಲಭ್ಯ ಹೆಚ್ಚಳಗೊಳಿಸಲಾಗುವುದು ಎಂದು ರಾಜ್ಯ ಕ್ರೀಡಾ ಮಂಡಳಿ ಅಧ್ಯಕ್ಷೆ, ಒಲಿಂಪಿಯನ್ ಮೆರ್ಸಿ ಕುಟ್ಟಿ ತಿಳಿಸಿದರು.
ಕಾಸರಗೋಡಿನ ಉದಯಗಿರಿಯ ಕ್ರೀಡಾ ಮಂಡಳಿಯ ಕೇಂದ್ರೀಕೃತ ಕ್ರೀಡಾ ಹಾಸ್ಟೆಲ್ ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಅವಲೋಕನ ನಡೆಸಿ ಅವರು ಮಾತನಾಡಿದರು. ಹಾಸ್ಟೆಲ್ ನ ಕ್ರೀಡಾಪಟುಗಳೊಂದಿಗೆ, ತರಬೇತುದಾರರೊಂದಿಗೆ, ಕಾಸರಗೋಡು ಜಿಲ್ಲಾ ಕ್ರೀಡಾಮಂಡಳಿ ಪದಾಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಿದರು. ಕಬಡ್ಡಿ, ವಾಲಿಬಾಲ್ ತಂಡಗಳಿರುವ ಹಾಸ್ಟೆಲ್ ನಲ್ಲಿ ಜಿಂ ಸಹಿತ ಸೌಲಭ್ಯಗಳ ಅಗತ್ಯವಿದೆ ಎಂದು ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಆಗ್ರಹಿಸಿದರು.
ಎರಡು ವಾಲಬಾಲ್ ಕೋರ್ಟ್ ಗಳ ನವೀಕರಣ ಸಹಿತ ಪ್ರತ್ಯೇಕ ಗಮನಹರಿಸಿ ಈ ವಿಚಾರ ಪರಿಶೀಲಿಸಲಾಗುವುದು ಎಂದೂ, ಕ್ರೀಡಾ ಸಚಿವರ ಗಮನಕ್ಕೆ ಈ ವಿಚಾರ ತರುವುದಾಗಿಯೂ ಮೆರ್ಸಿ ಕುಟ್ಟಿ ತಿಳಿಸಿದರು.
ಒಲಿಂಪಿಕ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾ ಮಂಡಳಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಅವರು ಬಹುಮಾನ ವಿತರಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಿ.ಪಿ.ಅಶೋಕನ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯಮೋಹನ್, ಪಳ್ಳಂ ನಾರಾಯಣನ್, ಕಾರ್ಯದರ್ಶಿ ಸುದೀಪ್ ಬಾಬು ಎಂ.ಎಸ್. ಮೊದಲಾದವರು ಜತೆಗಿದ್ದರು.