ತಿರುವನಂತಪುರಂ: ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳದ ಕುಲಸಚಿವರು ಆಗಸ್ಟ್ 30ರಂದು ಹೊರಡಿಸಿರುವ ಸುತ್ತೋಲೆಯೊಂದರಲ್ಲಿ "ಸಂಸ್ಥೆಯ ಬೋಧಕರು ಹಾಗೂ ಉದ್ಯೋಗಿಗಳು ದೇಶ-ವಿರೋಧಿ ಎಂದು ತಿಳಿಯಬಹುದಾದ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ರೀತಿಯ ಪ್ರಚೋದನಾತ್ಮಕ ಭಾಷಣಗಳು/ಹೇಳಿಕೆಗಳನ್ನು ನೀಡಬಾರದು. ಹಾಗೇನಾದರೂ ಮಾಡಿದವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಲಾಗಿದೆ.
ವಿವಿಯ ಉಪಕುಲಪತಿಗಳ ಅನುಮತಿಯೊಂದಿಗೆ ಈ ಸುತ್ತೋಲೆ ಹೊರಡಿಸಲಾಗಿದೆ ಎಂದೂ ಅದರಲ್ಲಿ ತಿಳಿಸಲಾಗಿದೆ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ನೀತಿಗಳ ಟೀಕಾಕಾರರಾಗಿರುವವರ ಬಾಯ್ಮುಚ್ಚಿಸುವ ತಂತ್ರಗಾರಿಕೆ ಇದಾಗಿದೆ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ವಿವಿಯ ಹಲವು ಉಪನ್ಯಾಸಕರು ಹೇಳಿದ್ದಾರೆ.
ಆರೆಸ್ಸೆಸ್ ಅನ್ನು 'ಪ್ರೊಟೊ-ಫ್ಯಾಸಿಸ್ಟ್ ಸಂಘಟನೆ' ಎಂದು ಹೇಳಿದ ಪ್ರೊಫೆಸರ್ ಒಬ್ಬರನ್ನು ಅಮಾನತು ಮಾಡಿದ ಮೂರು ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ.