ಬೆಂಗಳೂರು: ಭಾರತವೇ ಅತ್ಯಂತ ವೈವಿಧ್ಯಮಯ ರಾಷ್ಟ್ರ. ಇಲ್ಲಿ ಹಲವು ಧರ್ಮ, ವಿಚಾರ, ಜಾತಿ, ಸಂಸ್ಕೃತಿಯ ಜನರಷ್ಟೇ ಅಲ್ಲ ಹಲವು ಭಾಷೆಗಳ ಜನರೂ ಇದ್ದಾರೆ. ಈ ನಡುವೆ ದೇಶದಲ್ಲಿ ಎಷ್ಟು ಭಾಷೆಗಳು ಬಳಕೆಯಲ್ಲಿವೆ ಎಂಬುದರ ಜತೆಗೆ ದೇಶದ ಅತ್ಯಂತ ಭಾಷಾವೈವಿಧ್ಯ ಇರುವ ಪ್ರದೇಶ ಯಾವುದು ಎಂಬುದು ಕೂಡ ಬಹಿರಂಗಗೊಂಡಿದೆ.
ಬುಕಿಂಗ್ಸ್ ಸಂಸ್ಥೆಯ ಶಮಿಕಾ ರವಿ ಹಾಗೂ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಷನ್ನ ಅಸೋಸಿಯೇಟ್ ಪ್ರೊಫೆಸರ್ ಮುದಿತ್ ಕಪೂರ್ ಅವರು 2011ರ ಜನಗಣತಿಯನ್ನು ವಿಶ್ಲೇಷಣೆ ಮಾಡುವ ಮೂಲಕ ದೇಶದಲ್ಲಿನ ಭಾಷೆಗಳ ಬಳಕೆ ಕುರಿತ ಈ ಅಂಶವನ್ನು ಕಂಡುಕೊಂಡಿದ್ದಾರೆ.
ಬೆಂಗಳೂರು ದೇಶದಲ್ಲೇ ಅತ್ಯಧಿಕ ಭಾಷೆಗಳು ಬಳಕೆಯಲ್ಲಿರುವ ನಗರವಾಗಿದೆ. ದೇಶದ ಅತ್ಯಂತ ಭಾಷಾವೈವಿಧ್ಯದ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 107 ಭಾಷೆಗಳನ್ನು ಮಾತನಾಡಲಾಗುತ್ತಿದೆ. ದೇಶದ 22 ಷೆಡ್ಯೂಲ್ಡ್ ಹಾಗೂ 84 ನಾನ್-ಷೆಡ್ಯೂಲ್ಡ್ ಭಾಷೆಗಳಿಗೆ ಕಡಿಮೆ ಇರದಂತೆ ಬೆಂಗಳೂರಿನಲ್ಲಿ ಭಾಷಾಬಳಕೆ ಇದೆ. ದೇಶದ ಯಾವುದೇ ಜಿಲ್ಲೆಯಲ್ಲೂ ಇಷ್ಟೊಂದು ಭಾಷಾವೈವಿಧ್ಯತೆ ಕಾಣಿಸುತ್ತಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಶೇ. 44.5 ಮಂದಿ ಕನ್ನಡ, ಶೇ. 15 ಜನರು ತಮಿಳು, ಶೇ. 14 ಮಂದಿ ತೆಲುಗು, ಶೇ. 12 ಮಂದಿ ಉರ್ದು, ಶೇ. 6 ಜನರು ಹಿಂದಿ ಹಾಗೂ ಶೇ. 3 ಮಂದಿ ಮಲಯಾಳಂ ಭಾಷೆ ಮಾತನಾಡುತ್ತಿದ್ದಾರೆ. ವಿಭಿನ್ನ ಭಾಷೆಗಳನ್ನು ಮಾತನಾಡುವ ಜನರು ಒಂದು ಸ್ಥಳದಲ್ಲಿ ಸೇರಿದಾಗ ಅದು ಆರ್ಥಿಕತೆ ಹಾಗೂ ಉದ್ಯೋಗಕ್ಕೆ ಚಾಲನಾ ಶಕ್ತಿ ಆಗುತ್ತದೆ ಎಂದು ಅವರು ಈ ವಿಶ್ಲೇಷಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)