ಪಾಲಕ್ಕಾಡ್ : ದೇಸಮಂಗಲಂನಲ್ಲಿರುವ ಮಲಬಾರ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆಯಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ವೈಶಾಖ್ ಗಂಗಾಧರನ್ ಅವರು ಉಚಿತವಾಗಿ ಮನೆಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಶೊರ್ನೂರ್ ಸಮೀಪದ ಕುಲಪ್ಪುಲಿಯ ನಿವಾಸಿ 31 ವರ್ಷ ವಯಸ್ಸಿನ ಗಂಗಾಧರನ್ ತಮ್ಮ ಅನ್‌ಲೈನ್ ತರಗತಿಗಳನ್ನು ಮುಗಿಸಿದ ಬಳಿಕ ಉಳಿಕೆ ಸಮಯವನ್ನು ಕೋವಿಡ್-19 ರೋಗಿಗಳ ಮನೆಗಳನ್ನು ಉಚಿತವಾಗಿ ಸ್ಯಾನಿಟೈಸ್ ಮಾಡಲು ಬಳಸಿಕೊಳ್ಳುತ್ತಾರೆ. ಎರಡನೇ ಅಲೆಯ ಸಂದರ್ಭದಲ್ಲಿ ಇದನ್ನು ಆರಂಭಿಸಿದ ಅವರು, 90 ಮನೆಗಳನ್ನು ಇದುವರೆಗೆ ಉಚಿತವಾಗಿ ಸ್ಯಾನಿಟೈಸ್ ಮಾಡಿದ್ದಾರೆ.
"ಒಂದನೇ ಅಲೆಯ ಅವಧಿಯಲ್ಲಿ ಹಲವಾರು ಯುವ ಸಂಘಟನೆಗಳು ಮತ್ತು ಕ್ಲಬ್‌ಗಳು ಇಂಥ ಚಟುವಟಿಕೆಯನ್ನು ಸ್ವಯಂಪ್ರೇರಿತವಾಗಿ ಮಾಡುತ್ತಿದ್ದವು. ಆದರೆ ಈ ಬಾರಿ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಹಲವು ಕುಟುಂಬಗಳು ಐಸೊಲೇಶನ್‌ನಲ್ಲಿದ್ದು, ಆದ್ದರಿಂದ ಇಂಥ ಮನೆಗಳನ್ನು ಸ್ಯಾನಿಟೈಸ್ ಮಾಡಲು ನೆರವಾಗುತ್ತಿದ್ದೇನೆ" ಎಂದು ವೈಶಾಖ್ ಹೇಳಿದರು.
ಮೊದಲು ಸ್ಯಾನಿಟೈಸೇಷನ್‌ಗೆ ಅಗತ್ಯವಾದ ರಾಸಾಯನಿಕ ಮತ್ತು ನೀರನ್ನು ಮನೆಯಿಂದಲೇ ತರುತ್ತಿದ್ದೆ. ಇದೀಗ ಅಗ್ನಿಶಾಮಕ ದಳ ಬ್ಲೀಚಿಂಗ್ ಪೌಡರ್ ಮತ್ತು ಇತರ ವಸ್ತುಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಕೆಲ ಕುಟುಂಬಗಳಲ್ಲಿ ಎಲ್ಲರಿಗೂ ಕೋವಿಡ್ ಪಾಸಿಟಿವ್ ಇದ್ದು, ಅಡುಗೆ ಮಾಡಲೂ ಜನ ಇಲ್ಲ. ನಮ್ಮ ಕನಾಯಮ್ ಗ್ರಾಮದಲ್ಲಿ ಆಹಾರ ಪೂರೈಕೆ ಪ್ಲಾಟ್‌ಫಾರ್ಮ್ ಗಳು ಕೂಡಾ ಇಲ್ಲ. ಆದ್ದರಿಂದ ಇಂಥ ಕುಟುಂಬಗಳಿಗೆ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರು ಪೂರೈಸುತ್ತಿದ್ದೇನೆ ಎಂದು ವಿವರಿಸಿದರು.