ನವದೆಹಲಿ: ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೋ ಸಹ ಸ್ಥಾಪಕ ಗೌರವ್ ಗುಪ್ತಾ ತನ್ನ ಹುದ್ದೆ ಹಾಗೂ ಸಂಸ್ಥೆಯನ್ನು ತೊರೆದಿದ್ದಾರೆ. ಈ ಬಗ್ಗೆ ಸಂಸ್ಥೆಯ ಉದ್ಯೋಗಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
2015ರಿಂದ ಜೊಮಾಟೋ ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಗುಪ್ತಾ ಪ್ರಮುಖ ಪಾತ್ರ ವಹಿಸಿದ್ದರು. 2018ರಲ್ಲಿ ಸಿಒಒ ಆಗಿದ್ದಲ್ಲದೆ, ಸಂಸ್ಥೆಯ ಐಪಿಒ ಹೊರ ತರಲು ಮುಖ್ಯ ಪಾತ್ರ ವಹಿಸಿದ್ದರು. ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಫಲರಾಗಿದ್ದರು. ಕೊರೊನಾ ಸಾಂಕ್ರಾಮಿಕದಿಂದ ಜೊಮಾಟೋಗೂ ಆರ್ಥಿಕ ಹಿನ್ನಡೆ ಉಂಟಾಗಿತ್ತು. ಶೇ 13ಕ್ಕೂ ಅಧಿಕ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇತ್ತೀಚೆಗೆ ಸಂಸ್ಥೆಯ ದಿನಸಿ ಡೆಲಿವರಿ ಸೇವೆ ಹಾಗೂ ನ್ಯೂಟ್ರಾಸ್ಯೂಟಿಕಲ್ ವ್ಯವಹಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಈ ಎರಡು ಗುಪ್ತಾ ಅವರ ಐಡಿಯಾ ಎಂಬುದು ಗಮನಾರ್ಹ.
''ಉತ್ತಮ ತಂಡವಾಗಿ ನಾವು ಕಾರ್ಯ ನಿರ್ವಹಿಸಿ, ಸಂಸ್ಥೆ ಕಟ್ಟಿ ಬೆಳೆಸಿದ್ದು ಸ್ಮರಣೀಯವಾಗಿದ್ದು, ನಾಯಕತ್ವ ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ,'' ಎಂದು ಮತ್ತೊಬ್ಬ ಸಹ ಸ್ಥಾಪಕ ದೀಪಿಂದರ್ ಗೊಯೆಲ್ ಪ್ರತಿಕ್ರಿಯಿಸಿದ್ದಾರೆ.
"ಜೊಮಾಟೊವನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮಲ್ಲಿ ಈಗ ಉತ್ತಮ ತಂಡವಿದೆ ಮತ್ತು ನನ್ನ ಪ್ರಯಾಣದಲ್ಲಿ ನಾನು ಪರ್ಯಾಯ ಮಾರ್ಗವನ್ನು ನೋಡಿಕೊಳ್ಳುವ ಸಮಯ ಬಂದಿದೆ. ನಾನು ಈ ಪತ್ರ ಬರೆಯುವಾಗ ನಾನು ತುಂಬಾ ಭಾವುಕನಾಗಿದ್ದೇನೆ ಮತ್ತು ಯಾವುದೇ ಪದಗಳು ನನ್ನ ಈಗಿನ ಪರಿಸ್ಥಿತಿಯನ್ನು ಅರ್ಥ ಮಾಡಿಸಿ, ನ್ಯಾಯ ಸಲ್ಲಿಸಬಲ್ಲದೋ ಗೊತ್ತಿಲ್ಲ, " ಎಂದು ಗುಪ್ತಾ ಅವರು ಕಂಪನಿಯ ಬ್ಲಾಗ್ ನಲ್ಲಿ ಕಾರ್ಯನಿರ್ವಾಹಕರಿಗೆ ಇಮೇಲ್ ಮೂಲಕ ಹೇಳಿದ್ದಾರೆ.
ಇದೇ ವೇಳೆ, ಜುಲೈನಲ್ಲಿ ಷೇರುಪೇಟೆಗೆ ಎಂಟ್ರಿ ಕೊಟ್ಟ ಜೊಮಾಟೊ, ಜೂನ್ 30, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 356 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 99.8 ಕೋಟಿ ರೂ ನಷ್ಟ ಅನುಭವಿಸಿತ್ತು. ಇದೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು 916 ಕೋಟಿ ರೂ ಆದಾಯ ಗಳಿಸಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ 283.5 ಕೋಟಿ ರು ಆದಾಯ ಗಳಿಸಿತ್ತು.