ನವದೆಹಲಿ, ಸೆಪ್ಟೆಂಬರ್ 02: ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಪೈಕಿ ಕೆಲವು ಮಂದಿಯಲ್ಲಿ ಯಾವುದೇ ನೋವು ಆಗದೆಯೇ, ಯಾವುದೇ ಸುಳಿವುಗಳು ಇಲ್ಲದೆಯೇ ಕಿಡ್ನಿಗೆ (ಮೂತ್ರ ಪಿಂಡ) ಹಾನಿ ಉಂಟಾಗಿದೆ ಎಂದು ಅಧ್ಯಯನವೊಂದು ಕಂಡು ಹಿಡಿದಿದೆ.
ಕೊರೊನಾ ವೈರಸ್ ಸೋಂಕಿಗೆ ಮನೆಯಲ್ಲೇ ಚಿಕಿತ್ಸೆ ಪಡೆದ ಹಾಗೂ ಕೋವಿಡ್‌ನ ಗಂಭೀರ ಲಕ್ಷಣಗಳನ್ನು ಹೊಂದಿ ಕೋವಿಡ್‌ನ ವಿರುದ್ದ ಹೋರಾಡಿ ಉಳಿದವ ಕಿಡ್ನಿಗೆ ಹಾನಿ ಉಂಟಾಗಿರುವ ಕೆಲವು ಘಟನೆಗಳು ನಡೆದಿದೆ ಎಂದು ಅಧ್ಯಯನವಯ ಹೇಳುತ್ತದೆ. ಯಾವುದೇ ಮೂತ್ರಪಿಂಡದ ಸಮಸ್ಯೆಗಳಿಲ್ಲದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯದ ರೋಗಿಗಳಲ್ಲಿ ಇದ್ದಕ್ಕಿದ್ದಂತೆ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯು ಬೆಳವಣಿಗೆಯ ಆಗುತ್ತದೆ. ಕೋವಿಡ್ ಬರದೆ ಕಿಡ್ನಿ ವೈಫಲ್ಯಕ್ಕೆ ಒಳಗಾದವರಿಗೆ ಉಂಟಾಗುವ ಅಪಾಯಕ್ಕಿಂತ ಎರಡು ಪಟ್ಟು ಹೆಚ್ಚಿನ ಅಪಾಯವನ್ನು ಕೋವಿಡ್ ಸೋಂಕಿತರಿಗೆ ಉಂಟು ಮಾಡಿದೆ ಎಂದು ಅಧ್ಯಯನವು ಹೇಳಿದೆ.
ಅಮೆರಿಕದ ಸೊಸೈಟಿ ಆಫ್ ನೆಫ್ರಾಲಜಿಯ ಜರ್ನಲ್‌ನಲ್ಲಿ ಸಂಶೋಧನೆಯು ಬುಧವಾರ ವರದಿಯಾಗಿದೆ. ಜಾಗತಿಕವಾಗಿ 200 ದಶಲಕ್ಷಕ್ಕೂ ಹೆಚ್ಚು ಜನರನ್ನು ಅನಾರೋಗ್ಯಕ್ಕೆ ಒಳಪಡಿಸಿದ ಕೋವಿಡ್ ಸಾಂಕ್ರಾಮಿಕ ರೋಗವು ಈಗ ಮತ್ತೆ ಹಾನಿಕಾರಕ ಅಂಶವನ್ನು ಹೊಂದಿದೆ ಎಂದು ಅಧ್ಯಯನವು ವಿವರಿಸಿದೆ. ಸೌಮ್ಯದಿಂದ ಮಧ್ಯಮ ಲಕ್ಷಣವನ್ನು ಹೊಂದಿರುವ ಕೋವಿಡ್ ರೋಗಿಗಳ 10,000 ಜನರ ಪೈಕಿ 7.8 ಜನರಿಗೆ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡಲಾಗಿದೆ ಎಂದು ದತ್ತಾಂಶವು ಹೇಳಿದೆ.
ಹೆಚ್ಚಿನ ಜನರಲ್ಲಿ ಕಾಣಿಸಿಕೊಂಡಿದೆ ಕಿಡ್ನಿ ಸಮಸ್ಯೆ
"ಇದು ಸಣ್ಣ ಸಂಖ್ಯೆಯಲ್ಲ, ಹೆಚ್ಚಿನ ಸಂಖ್ಯೆಯ ಅಮೆರಿಕನ್ನರಲ್ಲಿ ಮತ್ತು ಜಾಗತಿಕವಾಗಿ ಹಲವು ಮಂದಿಯಲ್ಲಿ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ ಕಾಣಿಸಿಕೊಂಡಿದೆ," ಎಂದು ಮಿಸೌರಿಯ ವೆಟರನ್ಸ್ ಅಫೇರ್ಸ್ ಸೇಂಟ್ ಲೂಯಿಸ್ ಹೆಲ್ತ್ ಕೇರ್ ಸಿಸ್ಟಂನಲ್ಲಿ ಕ್ಲಿನಿಕಲ್ ಎಪಿಡೆಮಿಯಾಲಜಿ ಕೇಂದ್ರದ ನಿರ್ದೇಶಕರು ಆದ ಜಿಯಾದ್ ಅಲ್-ಅಲಿ ಹೇಳಿದ್ದಾರೆ. "ಕಿಡ್ನಿ ಹಾನಿ ಹಲವಾರು ಮಂದಿಯಲ್ಲಿ ಕಾಣಿಸಿಕೊಂಡಿದೆ. ಈ ಸಂಖ್ಯೆಯು ಸಣ್ಣ ಪ್ರಮಾಣದಲ್ಲಿ ಇಲ್ಲ, ದೊಡ್ಡದಾಗಿದೆ," ಎಂದು ಜಿಯಾದ್ ಅಲ್-ಅಲಿ ತಿಳಿಸಿದ್ದಾರೆ.
ಕೋವಿಡ್ ರೋಗಿಗಳಲ್ಲಿ ಬೇರೆ ಸಮಸ್ಯೆಗಳೂ ಇನ್ನೂ ಇದೆ
ಈ ಅಧ್ಯಯನದ ನೇತೃತ್ವವನ್ನು ಮಿಸೌರಿಯ ವೆಟರನ್ಸ್ ಅಫೇರ್ಸ್ ಸೇಂಟ್ ಲೂಯಿಸ್ ಹೆಲ್ತ್ ಕೇರ್ ಸಿಸ್ಟಂನಲ್ಲಿ ಕ್ಲಿನಿಕಲ್ ಎಪಿಡೆಮಿಯಾಲಜಿ ಕೇಂದ್ರದ ನಿರ್ದೇಶಕರು ಆದ ಜಿಯಾದ್ ಅಲ್-ಅಲಿ ವಹಿಸಿದ್ದರು. ಏಪ್ರಿಲ್‌ನಲ್ಲಿ ಈ ಅಧ್ಯಯನಕಾರರು ಮಾಹಿತಿಯನ್ನು ವೆಟರನ್ಸ್ ಹೆಲ್ತ್ ಅಡ್ಮಿನಿಸ್ಟ್ರೇಷನ್‌ನಿಂದ ಸಂಗ್ರಹ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಬದುಕುಳಿದವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯು, ಮಧುಮೇಹ, ಹೃದಯ ಕಾಯಿಲೆ, ಯಕೃತ್ತು ಮತ್ತು ಮೂತ್ರಪಿಂಡದ ಹಾನಿ, ಖಿನ್ನತೆ, ಆತಂಕ, ಉಸಿರಾಟ ತೊಂದರೆ, ನೆನಪು ಕಳೆದುಕೊಳ್ಳುವಂತಹ ಗಂಭೀರ ಸಮಸ್ಯೆಗಳು ಇನ್ನೂ ಇದೆ ಎಂದು ಅಧ್ಯಯನ ವರದಿ ಹೇಳಿದೆ.
ಸಾಮಾನ್ಯ ಜನರು ಹಾಗೂ ಕೋವಿಡ್ ಸೋಂಕಿತರ ಕಿಡ್ನಿ ಹೋಲಿಕೆ
ಅಲ್-ಅಲಿಯ ಇತ್ತೀಚಿನ ಸಂಶೋಧನೆಯು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಿಲ್ಲದಿರುವ 1.7 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಹಾಗೂ ಕೋವಿಡ್‌ನಿಂದ ಬದುಕುಳಿದ 89,216 ವಿಎ ಬಳಕೆದಾರರಲ್ಲಿ ಮೂತ್ರಪಿಂಡ ಸಂಬಂಧಿತ ಪರಿಸ್ಥಿತಿಗಳ ಅಪಾಯಗಳನ್ನು ಹೋಲಿಕೆ ಮಾಡಿದೆ. "ಮೂತ್ರಪಿಂಡದ ಕಾಯಿಲೆಯ ಬಗ್ಗೆ ನಿಜವಾಗಿಯೂ ಸಮಸ್ಯಾತ್ಮಕವಾದದ್ದು ಎಂದರೆ ಅದು ನಿಜವಾಗಿಯೂ ಯಾವುದೇ ನೋವನ್ನು ಉಂಟು ಮಾಡಿಲ್ಲ ಎಂಬುವುದು, ಜನರಿಗೆ ನೋವಾದರೆ ಈ ಬಗ್ಗೆ ತಿಳಿಯುತ್ತದೆ. ಮೊದಲೇ ಚಿಕಿತ್ಸೆ ಪಡೆಯುತ್ತಾರೆ. ಆದರೆ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಜನರಿಗೆ ತಮ್ಮ ಕಿಡ್ನಿಯಲ್ಲಿ ಸಮಸ್ಯೆ ಉಂಟಾಗಿದೆ ಅಥವಾ ಹಾನಿಯಾಗಿದೆ ಎಂಬುವುದು ತಿಳಿದು ಬರುವುದಿಲ್ಲ. ಕೊನೆಯ ಹಂತಕ್ಕೆ ತಲುಪಿದ ನಂತರವೇ ತಿಳಿಯುತ್ತದೆ," ಎಂದು ಮೂತ್ರಶಾಸ್ತ್ರಜ್ಞರಾದ ಅಲ್-ಆಲಿ ಹೇಳಿದ್ದಾರೆ.
ವೈದ್ಯರು ಕೋವಿಡ್ ಸೋಂಕಿತರ ಕಿಡ್ನಿಯನ್ನೂ ತಪಾಸಣೆ ಮಾಡಿ
ಅಲ್-ಅಲಿ ಮತ್ತು ಸಹೋದ್ಯೋಗಿಗಳು ಆಸ್ಪತ್ರೆಯಲ್ಲಿಲ್ಲದ ಕೋವಿಡ್ ರೋಗಿಗಳಿಗೆ ಆರು ತಿಂಗಳಲ್ಲಿ ತೀವ್ರ ಮೂತ್ರಪಿಂಡದ ಹಾನಿ ಉಂಟಾಗುವ ಪ್ರಮಾಣವು ಶೇಕಡ 23 ಹೆಚ್ಚಾಗುವ ಅಪಾಯವಿದೆ ಎಂದು ಕಂಡು ಕೊಂಡಿದ್ದಾರೆ. ಈ ಕಿಡ್ನಿಗೆ ಹಾನಿ ಉಂಟಾದರೆ ಜನರ ಜೀವಕ್ಕೆ ಅಪಾಯ ಎಂದು ಅಧ್ಯಯನ ಹೇಳುತ್ತದೆ. "ಕೋವಿಡ್ ಸೋಂಕಿನಿಂದ ಬದುಕುಳಿದವರನ್ನು ನೋಡಿಕೊಳ್ಳುವ ವೈದ್ಯರು ಈ ರೋಗಿಗಳಲ್ಲಿ ಮೂತ್ರಪಿಂಡ ಕಾಯಿಲೆಯ ಬಗ್ಗೆಯೂ ಎಚ್ಚರಿಕೆಯಿಂದ ತಪಾಸಣೆ ನಡೆಸಬೇಕು," ಎಂದು ಅಲ್-ಆಲಿ ಹೇಳುತ್ತಾರೆ. "ಇದು ನಿಜವಾಗಿಯೂ ಅಧಿಕವಾಗಿ ವ್ಯಾಪಿಸಿದ್ದರೆ, ಅದು ಚಿಂತಾಧಾಯಕ ವಿಚಾರ. ಎಲ್ಲರೂ ಕ್ಲಿನಿಕ್‌ಗಳಿಗೆ ಹೋಗುವುದು, ಡಯಾಲಿಸಿಸ್ ಮಾಡಿಸಿಕೊಳ್ಳುವುದು, ಕಿಡ್ನಿ ಕಸಿ ಮಾಡಿಸಿಕೊಳ್ಳುವುದು ಇವೆಲ್ಲವೂ ರೋಗಿಯ ಮೇಲೆ ಅಧಿಕ ಹೊರೆಯನ್ನು ಉಂಟು ಮಾಡುತ್ತದೆ. ಆರೋಗ್ಯ ವ್ಯವಸ್ಥೆಗೆ ತುಂಬಾ ದುಬಾರಿಯಾಗುತ್ತದೆ," ಎಂದು ಅಲ್-ಆಲಿ ಆತಂಕ ವ್ಯಕ್ತಪಡಿಸಿದ್ದಾರೆ.