ಕಾಸರಗೋಡು: ಕೇಂದ್ರ ಸಾರ್ವಜನಿಕ ವಲಯದ ಶೇ 51 ಪಾಲುದಾರಿಕೆ ಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುವ ಮೂಲಕ ಕಾಸರಗೋಡಿನ ಇಲೆಕ್ಟ್ರಿಕಲ್ ಮೆಷಿನ್ಸ್ ಲಿಮಿಟೆಡ್ ಸಂಸ್ಥೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಕಾಸರಗೋಡು ಬೆದ್ರಡ್ಕದ ಭೆಲ್-ಇ.ಎಂ.ಎಲ್ ಕಂಪನಿ ವಹಿಸಿಕೊಳ್ಳುವ ಘೋಷಣೆ ನಡೆಸಿ ಅವರು ಮಾತನಾಡಿದರು. ಟ್ರಾಕ್ಷನ್ ಮೋಟಾರುಗಳು, ಕಂಟ್ರೋಲರ್‍ಗಳು, ರೈಲ್ವೇ, ಪ್ರತಿರೋಧ ವಲಯಗಳಿಗೆ ಅಗತ್ಯವಿರುವ ಆಲ್ಟರ್ ನೆಟ್ ಗಳು, ವಿದ್ಯುತ್ ವಲಯಕ್ಕೆ ಅಗತ್ಯವಿರುವ ಸ್ಟ್ರೀಟ್ ಲೈಟ್ ಕಂಟ್ರೋಲರ್ ಸೇರಿದಂತೆ ವಿವಿಧ ಉತ್ಪನ್ನಗಳ ಮಾದರಿ ನಿರ್ಮಾಣ ಸಂಸ್ಥೆಯಾಗಿ ಇ.ಎಂ.ಎಲ್.ನ್ನು ಅಭಿವೃದ್ಧಿಪಡಿಸಲಾಗುವುದು. ಸಂಸ್ಥೆ ಪುನಶ್ಚೇತನಕ್ಕಾಗಿ 43 ಕೋಟಿ ರೂ., ಆರ್ಥಿಕ ಹೊರೆಯಾಗಿರುವ 34 ಕೋಟಿ ರೂ. ಸೇರಿ ಒಟ್ಟು 77 ಕೋಟಿ ರೂ. ವೆಚ್ಚಮಾಡಿ ರಾಜ್ಯ ಸರ್ಕಾರ ಈ ಕಂಪನಿಯನ್ನು ತನ್ನ ವಶಕ್ಕೆ ವಹಿಸಿಕೊಂಡಿದೆ. ಕಳೆದ 2 ವರ್ಷಗಳಿಂದ ಈ ಸಂಸ್ಥೆಯ ಸಿಬ್ಬಂದಿಗೆ ವೇತನ ಲಭಿಸದೇ ಇರುವ ಹಿನ್ನೆಲೆಯಲ್ಲಿ 14 ಕೋಟಿ ರೂ. ನ್ನು ವೇತನ ರೂಪದಲ್ಲಿ ಒದಗಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಹಿಂದೆ ರಾಜ್ಯ ಸಾರ್ವಜನಿಕ ಸಂಸ್ಥೆಯಾಗಿದ್ದ ಕಾಸರಗೋಡಿನ ಇ.ಎಂ.ಎಲ್. ಕಂಪನಿಯ ಶೇ 51 ಶೇರುಗಳನ್ನು ನವರತ್ನ ಕಂಪನಿಯಾಗಿರುವ ಭೆಲ್ ಗೆ ಹಸ್ತಾಂತರಿಸಲಾಗಿದೆ.
ರಾಜ್ಯ ಸರ್ಕಾರದ ನೂರು ದಿನಗಳ ಕ್ರಿಯಾ ಯೋಜನೆ ಅಂಗವಾಗಿ ಕಾಸರಗೋಡಿನ ಇ.ಎಂ.ಎಲ್. ಇನ್ನು ಮುಂದೆ ರಾಜ್ಯದ ಸಾರ್ವಜನಿಕ ಸಂಸ್ಥೆಯಾಗಲಿದೆ. 2011ರ ವರೆಗೆ ರಾಜ್ಯ ಸಾರ್ವಜನಿಕ ಸಂಸ್ಥೆಯಾಗಿದ್ದ ಕಂಪೆನಿ 5 ಕೋಟಿ ರೂ.ನ ಲಾಭ ತಂದಿತ್ತು.