ಟೋಕಿಯೋ: ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡುತ್ತಿದ್ದು, ಮರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್ ಎತ್ತರದ ಜಿಗಿತ (ಹೈ ಜಂಪ್ ನಲ್ಲಿ) ಅನುಕ್ರಮವಾಗಿ ರಜತ ಪದಕ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ.
ಇಬ್ಬರೂ ಕ್ರೀಡಾಪಟುಗಳು ಕ್ಲಾಸ್ ಟಿ42 ಯಲ್ಲಿದ್ದು ಮರಿಯಪ್ಪನ್ ತಂಗವೇಲು 1.86 ಮೀಟರ್ ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. 2016 ರ ರಿಯೋ ಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಇದು ಅವರ 2 ನೇ ಪದಕವಾಗಿದೆ.
ಇದೇ ವೇಳೆ ಶರದ್ ಕುಮಾರ್ 1.83 ಮೀಟರ್ ಜಿಗಿಯುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. 2016 ರ ರಿಯೋ ಒಲಂಪಿಕ್ಸ್ ನ ರಜತ ಪದಕ ವಿಜೇತ ಅಮೆರಿಕದ ಸ್ಯಾಮ್ ಗ್ರೀವೆ ಮೂರನೇ ಯತ್ನದಲ್ಲಿ 1.88 ಮೀಟರ್ ಜಿಗಿಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಮತ್ತೋರ್ವ ರಿಯೋ ಪದಕ ವಿಜೇತ ಕ್ರೀಡಾಪಟು ವರುಣ್ ಸಿಂಗ್ ಭಾಟಿ 1.77 ಮೀಟರ್ ಜಿಗಿಯುವ ಮೂಲಕ 7 ನೇ ಸ್ಥಾನದಲ್ಲಿದ್ದಾರೆ.