ಬೆಂಗಳೂರು: ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕಗೊಂಡಿರುವ ವಿಚಾರ ರಾಜ್ಯ ಹೈಕೋರ್ಟ್ ಮೆಟ್ಟಲೇರಿರುವುದು ಗೊತ್ತಿರುವ ವಿಚಾರ. 16 ವರ್ಷದ ಬಾಲಕನನ್ನು ಪೀಠಾಧಿಪತಿಯನ್ನಾಗಿ ಮಾಡಿರುವುದನ್ನು ಪ್ರಶ್ನಿಸಿ, ಕೃಷ್ಣೈಕ್ಯರಾಗಿರುವ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.
ಸೋಮವಾರದಂದು (ಸೆ 13) ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ವಿಚಾರಗಳನ್ನು ಪರಿಶೀಲಿಸಲು ಹಿರಿಯ ವಕೀಲರಾದ ಎಸ್.ಎಸ್.ನಾಗಾನಂದ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿದೆ.
ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ಸಚಿನ್ ಶಂಕರ್ ಮಗುದಮ್ ನೇತೃತ್ವದ ವಿಭಾಗೀಯ ಪೀಠ, "ಹದಿನಾರು ವರ್ಷದ ಬಾಲಕನನ್ನು ಮಗುವೆಂದು ಪರಿಗಣಿಸುವಿರಾ" ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. "ಹದಿನಾರು ವರ್ಷದ ಮಗುವನ್ನು ನಾಡಿನ ಪ್ರಮುಖ ಮಾಧ್ವಪೀಠದ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವುದೇ"ಎಂದು ಅರ್ಜಿದಾರರ ಪ್ರಶ್ನೆಗೆ ಪೀಠ ತನ್ನ ಅಭಿಪ್ರಾಯವನ್ನು ಮಂಡಿಸಿದೆ.
ರಾಜ್ಯ ಸರಕಾರದ ಪರ ವಾದ ಮಂಡಿಸಿದ ವಕೀಲರು,"ತಮ್ಮ ಹನ್ನೆರಡನೇ ವಯಸ್ಸಿಗೆ ಶಂಕರಾಚಾರ್ಯರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಅಪ್ರಾಪ್ತರನ್ನು ಪೀಠಾಧಿಪತಿಯನ್ನಾಗಿ ನೇಮಿಸಬಾರದು ಎನ್ನುವ ಕಾನೂನು ಇಲ್ಲ"ಎಂದು ವಕೀಲರು, ಕೋರ್ಟ್ ಪೀಠಕ್ಕೆ ಹೇಳಿದರು.
ಏನಿದು ವಿವಾದ?
ಬಾಲಕನ ಮೇಲೆ ಬಲವಂತವಾಗಿ ಐಹಿಕ ಭೋಗಗಳನ್ನು ತ್ಯಜಿಸುವುದನ್ನು ಹೇರಬಹುದೇ?
"ನಮ್ಮ ಅರ್ಜಿಯಲ್ಲಿನ ಪ್ರಮುಖ ಪ್ರಶ್ನೆಯೆಂದರೆ, ನಮ್ಮ ಸಂವಿಧಾನದ ಪ್ರಕಾರ ಹದಿನೆಂಟು ತುಂಬದ ಬಾಲಕನ ಮೇಲೆ, ಸನ್ಯಾಸಿ ಪೀಠ ಎಂದು ಬಲವಂತವಾಗಿ ಐಹಿಕ ಭೋಗಗಳನ್ನು ತ್ಯಜಿಸುವುದನ್ನು ಹೇರಬಹುದೇ" ಎಂದು ಅರ್ಜಿದಾರರು ಮರು ಪ್ರಶ್ನಿಸಿದರು. ಈ ವಾದವನ್ನು ಮಹತ್ವದ ವಿಚಾರ ಎಂದ ಪರಿಗಣಿಸಬೇಕಾಗುತ್ತದೆ ಎಂದು ನಾಗಾನಂದ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿ, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಕೋರ್ಟ್ ಮುಂದೂಡಿದೆ.
ಶತಮಾನಗಳ ಇತಿಹಾಸವಿರುವ ಉಡುಪಿ ಕೃಷ್ಣಮಠದ, ಅಷ್ಟಮಠದ ಸಂಪ್ರದಾಯ
ಶತಮಾನಗಳ ಇತಿಹಾಸವಿರುವ ಉಡುಪಿ ಕೃಷ್ಣಮಠದ, ಅಷ್ಟಮಠದ ಸಂಪ್ರದಾಯಗಳ ಪ್ರಕಾರ, ಎಂಟು ಮಠಾಧೀಶರ ಪೈಕಿ (ಉತ್ತರಾಧಿಕಾರಿ ನೇಮಕವಾಗಿಲ್ಲದಿದ್ದರೆ), ಯಾರಾದರೂ ಕೃಷ್ಣೈಕ್ಯರಾದರೆ, ಆ ಮಠದ ಸಂಪೂರ್ಣ ಜವಾಬ್ದಾರಿ ದ್ವಂದ್ವ ಮಠಕ್ಕೆ ಹೋಗುತ್ತೆ. ಅದರಂತೇ, ಶಿರೂರು ಮಠದ ಲಕ್ಷ್ಮೀವರ ತೀರ್ಥರು ಎರಡು ವರ್ಷದ ಹಿಂದೆ ಹರಿಪಾದ ಸೇರಿದಾಗ ಆ ಮಠದ ಜವಾಬ್ದಾರಿ ಸೋದೆ ಮಠಕ್ಕೆ ಹೋಗಿತ್ತು. ಅದರಂತೇ, ಶಿರೂರು ಮಠಕ್ಕೆ ಹದಿನಾರು ವರ್ಷದ ಬಾಲಕನನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ
ಶಿರೂರು ಮಠದ ಹಿಂದಿನ ಶ್ರೀಗಳಾದ ಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ಮತ್ತಿಬ್ಬರು ಮಠಕ್ಕೆ ಉತ್ತರಾಧಿಕಾರಿ ನೇಮಕ ಕಾನೂನುಬಾಹಿರ, ಅಪ್ರಾಪ್ತ ವಯಸ್ಕ ಎಂದು ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು. ವಿಷ್ಣುಪಾದ ಸೇರಿರುವ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಅಷ್ಟಮಠಗಳಿಗೆ ಅಲಿಖಿತ ಸಂವಿಧಾನವನ್ನು ರಚಿಸಿದ್ದರು. ಅದರಂತೇ, ಇಪ್ಪತ್ತು ವರ್ಷ ಸಂಪೂರ್ಣಗೊಂಡ ನಂತರ ಮತ್ತು ಹತ್ತು ವರ್ಷಗಳ ವೇದಾಧ್ಯಯನ ಮಾಡಿದ ನಂತರವಷ್ಟೇ ಸನ್ಯಾಸ ದೀಕ್ಷೆ ನೀಡಬೇಕು ಎನ್ನುವುದು ಪೇಜಾವರ ಶ್ರೀಗಳು ಅದರಲ್ಲಿ ಉಲ್ಲೇಖಿಸಿದ್ದರು ಎನ್ನುವುದು ಶಿರೂರು ಮಠದ ಭಕ್ತರ ಆರೋಪ.
ಬಾಲಕ ಶಿರೂರು ಮಠದ ಶಿಷ್ಯನಾಗಿರಲಿಲ್ಲ
ಕೋರ್ಟ್ ಮೆಟ್ಟಲೇರಿರುವುದಿರಕ್ಕೆ ಹಲವು ಕಾರಣಗಳನ್ನು ಅರ್ಜಿದಾರರು ಕೋರ್ಟ್ ನಲ್ಲಿ ನೀಡಿದ್ದಾರೆ. ಅಪ್ರಾಪ್ತ ವಯಸ್ಕ, ಬಲವಂತದ ಪೀಠಾರೋಹಣ, ಮಠದ ಆಸ್ತಿಪಾಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ, ಬಾಲಕ ಶಿರೂರು ಮಠದ ಶಿಷ್ಯನಾಗಿರಲಿಲ್ಲ, ಹೀಗೆ.. ಈಗಾಗಲೇ ಹೈಕೋರ್ಟ್ ನಲ್ಲಿ ಹಲವು ಸುತ್ತಿನ ವಿಚಾರಣೆ ನಡೆದಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 23ಕ್ಕೆ ನಡೆಯಲಿದೆ.