ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟವರಿಗೆ ಮರಣ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಕೆಲಸವು ವಿಳಂಬವಾಗುತ್ತಿರುವುದಕ್ಕೆ, ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.
'ನಾವು ಈ ಹಿಂದೆಯೇ ಈ ಬಗ್ಗೆ ಆದೇಶ ಹೊರಡಿಸಿದ್ದೇವೆ. ಈಗಾಗಲೇ ಒಂದು ಸಲ ಸಮಯಾವಕಾಶವನ್ನೂ ವಿಸ್ತರಿಸಿದ್ದೇವೆ. ಇನ್ನು ಮುಂದೆ ರೂಪಿಸುತ್ತೇವೆ ಎಂದರೆ, ನೀವು ಮಾರ್ಗಸೂಚಿ ರೂಪಿಸುವುದರೊಳಗಾಗಿ ಕೋವಿಡ್ ಮೂರನೇ ಅಲೆಯೂ ಬಂದು ಹೋಗುತ್ತದೆ' ಎಂದು ನ್ಯಾಯಮೂರ್ತಿ ಎಂ.ಆರ್.ಶಾ ನೇತೃತ್ವದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
'ಈ ಪ್ರಕ್ರಿಯೆಯು ಜಾರಿಯಲ್ಲಿದೆ. ಶೀಘ್ರದಲ್ಲೇ ಅಂತಿಮಗೊಳಿಸಲಿದ್ದೇವೆ. ಅಂತಿಮ ಪ್ರಮಾಣಪತ್ರ ಸಲ್ಲಿಸಲು ಇನ್ನೂ ಸ್ಪಲ್ಪ ಸಮಯ ನೀಡಬೇಕು' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದಾಗ, ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಆರು ವಾರಗಳ ಒಳಗಾಗಿ ಮಾರ್ಗಸೂಚಿ ರೂಪಿಸುವಂತೆ ಸುಪ್ರೀಂ ಕೋರ್ಟ್, ಪ್ರಧಾನಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಜೂನ್ 30ರಂದು ನಿರ್ದೇಶಿಸಿತ್ತು.
ಆದರೆ, ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಸಮಗ್ರ ಯೋಜನೆ ರೂಪಿಸಬೇಕಿದ್ದು, ನಾಲ್ಕು ವಾರಗಳ ಹೆಚ್ಚುವರಿ ಸಮಯಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವು ಆಗಸ್ಟ್ 16ರಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿತ್ತು.
ಜೂನ್ 30ರಂದು ನೀಡಿದ ನ್ಯಾಯಾಲಯದ ಆದೇಶದ ಅನುಪಾಲನಾ ವರದಿ (ಸೆ.11ರವರೆಗೆ) ಮತ್ತು ಸೆ.3ರವರೆಗೆ ಆಗಿರುವ ಕೆಲಸವೇನು ಎಂಬ ಬಗ್ಗೆಯೂ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪೀಠವು ಸೂಚಿಸಿತು.