ಬದಿಯಡ್ಕ: ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರ ವ್ಯಕ್ತಿ-ವ್ಯಕ್ತಿತ್ವಗಳು ಭಿನ್ನವಾಗಿದ್ದರೂ ಲಕ್ಷ್ಯಗಳು ಒಂದೇ ಆಗಿದ್ದವು. ಒಬ್ಬರು ಎಲ್ಲವೂ ಇದ್ದು ದಮನಿತರ ಪರವಾಗಿ ಧ್ವನಿಯೆತ್ತಿ ಶ್ರೇಯಸ್ಸಿಗೆ ಹೋರಾಡಿದರೆ, ಇನ್ನೊಬ್ಬರು ದಮನಿತ ಸಮಾಜದಿಂದ ಮೇಲೆದ್ದು ಆ ಸಮಾಜದ ಏಳ್ಗೆಗೆ ಬದುಕು ಮೀಸಲಿಟ್ಟವರು. ಇಂತವರ ಯಶೋಗಾಥೆಗಳು ಆಧುನಿಕ ಸಮಾಜಕ್ಕೆ ನೈಜವಾಗಿ ತಲಪಿಸುವ ನಿಟ್ಟಿನಲ್ಲಿ ಸೆಳೆಯುವ ರೀತಿಯಲ್ಲಿ ತಲಪಿಸುವಲ್ಲಿ ರಾಮ ಕಂಡ ಭೀಮ ಕಥನ ಕಾವ್ಯ ಹೆಗ್ಗುರುತಾಗುವುದು ಎಂದು ಮಡಿಕೇರಿಯ ಪೋಲೀಸ್ ಅಧಿಕಾರಿ ಕೆ.ಎಸ್.ಧನಂಜಯ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅವರ ನೂತನ ಕೃತಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಕಥನ ಕವನ ರಾಮ ಕಂಡ ಭೀಮ ಕೃತಿಯನ್ನು ಶನಿವಾರ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವ ಸಾಹಿತಿ, ಸಂಶೋಧಕಿ ರಾಜಶ್ರೀ ಟಿ ರೈ ಪೆರ್ಲ ಅವರು ಮಾತನಾಡಿ, ಉಳಿಯತ್ತಡ್ಕ ಅವರ ಕೃತಿಗಳು ಓದುತ್ತಾ ಹೋದಂತೆ ತಣ್ಣನೆ ಕೊರೆಯುತ್ತಾ ಅಂತರಂಗದಲ್ಲಿ ಕೋಲ್ಮಿಂಚಿನ ಅರ್ಥ ಅನುಸಂಧಾನದ ಹುಡುಕಾಟಕ್ಕೆ ತೊಡಗಿಸಿಕೊಳ್ಳುತ್ತವೆ. ಸಂವಿಧಾನ ಶಿಲ್ಪಿ ಬಿ.ಆರ್ ಅಂಬೇಡ್ಕರ್ ಅವರ ಜೀವನಾಧಾರಿತ ಈ ವಿನೂತನ ಕೃತಿ ನಿಜವಾಗಿಯೂ ಪಠ್ಯವಾದಾಗ ರಾಷ್ಟ್ರ ಶಿಲ್ಪಿಯ ಕನಸು ಸಾಕಾರಗೊಳ್ಳುತ್ತದೆ ಎಂದರು.
ಕಾಸರಗೋಡಿನ ಯುವ ವಿದ್ಯಾರ್ಥಿಗಳ ಸಾಹಿತ್ಯ-ಸಾಂಸ್ಕøತಿಕ ಒಕ್ಕೂಟ ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ, ಶಿಕ್ಷಕ ಕಾರ್ತಿಕ್ ಪಡ್ರೆ ಕೃತಿ ಪರಿಚಯ ನೀಡಿದರು. ಕವಿ, ವೈಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು, ಕತೆಗಾರ ಬಿ.ಎಸ್.ಏತಡ್ಕ, ಸಂಘಟಕ ಜಗದೀಶ ಕೂಡ್ಲು ಶುಭಹಾರೈಸಿದರು. ಕೃತಿಕಾರ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದರು. ಸಮತಾ ಸಾಹಿತ್ಯ ವೇದಿಕೆಯ ಸುಂದರ ಬಾರಡ್ಕ ಸ್ವಾಗತಿಸಿ, ವಂದಿಸಿದರು. ವನಜಾಕ್ಷಿ ಚೆಂಬ್ರಕಾನ ನಿರೂಪಿಸಿದರು.