ನವದೆಹಲಿ: ದೇಶದಾದ್ಯಂತ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿನಿಯರಿಗಾಗಿ ಸಾಮರ್ಥ್ಯ ವೃದ್ಧಿ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಆರಂಭಿಸಿದೆ.
ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿನಿಯರು ಉದ್ಯೋಗ ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗುವಂತೆ ಅವರನ್ನು ಸಜ್ಜುಗೊಳಿಸಲು ವೈಯಕ್ತಿಕ ಸಾಮರ್ಥ್ಯ ವೃದ್ಧಿ, ವೃತ್ತಿಪರ ಕೆಲಸಗಳ ಕೌಶಲ್ಯ, ಡಿಜಿಟಲ್ ಸಾಕ್ಷರತೆ ಮತ್ತು ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಆಯೋಗ ಹೇಳಿದೆ.
ಹರಿಯಾಣದ ಕೇಂದ್ರೀಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಇಂತಹ ಮೊದಲ ಕಾರ್ಯಕ್ರಮ ನಡೆಯಿತು.
'ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ನಾಯಕಿಯರ ಅಗತ್ಯ ಇದೆ. ಆಯೋಗ ಆರಂಭಿಸಿರುವ ಕೋರ್ಸ್ ಉತ್ತಮ ನಾಯಕಿಯರನ್ನು ಅಣಿಗೊಳಿಸಲಿದೆ' ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದರು.
ಸಂದರ್ಶನ ಎದುರಿಸುವುದು ಸೇರಿದಂತೆ ಮಹಿಳೆಯರು ಉದ್ಯೋಗಕ್ಕೆ ಸೇರುವಾಗ ಎದುರಿಸಬೇಕಾದ ಎಲ್ಲಾ ಹಂತಗಳ ಬಗ್ಗೆ ನೆರವು ನೀಡುವ ಗುರಿಯನ್ನು ಈ ಕೋರ್ಸ್ ಹೊಂದಿದೆ ಎಂದರು.