ಕೋಲ್ಕತ್ತ: ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿರೀಕ್ಷೆಯಂತೆಯೇ ಭವಾನಿಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಮುರ್ಷಿದಾಬಾದ್‌ನ ಜಂಗೀಪುರ ಕ್ಷೇತ್ರದಿಂದ ಮಾಜಿ ಸಚಿವ ಜಾಕಿರ್ ಹುಸೇನ್, ಸಮ್‌ಸೇರ್‌ಗಂಜ್ ಕ್ಷೇತ್ರದಿಂದ ಅಮಿರುಲ್ ಇಸ್ಲಾಂ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಎರಡೂ ಕ್ಷೇತ್ರಗಳ ಶಾಸಕರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು. ಹೀಗಾಗಿ ಉಪಚುನಾವಣೆ ನಡೆಯುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ಭವಾನಿಪುರ ಬಿಟ್ಟು ನಂದಿಗ್ರಾಮ ಕ್ಷೇತ್ರದಿಂದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಮಮತಾ ಬ್ಯಾನರ್ಜಿ ಅವರು ಮೇ 5ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನವೆಂಬರ್ 5ರ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿದೆ. ಹೀಗಾಗಿ ಮಮತಾ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಸಲುವಾಗಿ ಭವಾನಿಪುರದ ಶಾಸಕ ಸ್ಥಾನಕ್ಕೆ ಶೋಭನ್‌ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ್ದರು.
ಸೆಪ್ಟೆಂಬರ್ 30ಕ್ಕೆ ಉಪಚುನಾವಣೆ ನಿಗದಿಯಾಗಿದೆ.