ನವದೆಹಲಿ : 'ಉತ್ತಮ ರಸ್ತೆಗಳು ಮುಂತಾದ ಉತ್ತಮ ಸೇವೆಗಳು ಬೇಕಿದ್ದರೆ ಜನರು ಅದಕ್ಕೆ ಹಣ ನೀಡಬೇಕಿದೆ,'' ಎಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಧಿಸಲಾಗುವ ಟೋಲ್ ದರಗಳ ಕುರಿತಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
'ಹವಾನಿಯಂತ್ರಿತ ಸಭಾಂಗಣ ಬಳಸಬೇಕಿದ್ದರೆ ನೀವು ಅದಕ್ಕೆ ಹಣ ತೆರಬೇಕಿದೆ. ಇಲ್ಲದೇ ಹೋದಲ್ಲಿ ನೀವು ಗದ್ದೆಯಲ್ಲಿ ಕೂಡ ವಿವಾಹ ಕಾರ್ಯಕ್ರಮ ನಡೆಸಬಹುದು,'' ಎಂದು ಎಕ್ಸ್‍ಪ್ರೆಸ್‍ವೇಗಳಲ್ಲಿ ಟೋಲ್ ದರಗಳು ಪ್ರಯಾಣ ವೆಚ್ಚವನ್ನು ಏರಿಸಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ಹೇಳಿದರು ಎಂದು ವರದಿ ಮಾಡಿದೆ.
ದಿಲ್ಲಿ-ಮುಂಬೈ ಎಕ್ಸ್‍ಪ್ರೆಸ್‍ವೇ ಇದರ ಭಾಗವಾಗಿ ಹರ್ಯಾಣಾದ ಸೋಹ್ನಾದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ನಂತರ ಸಚಿವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
'ಉತ್ತಮ ಗುಣಮಟ್ಟದ ಎಕ್ಸ್‍ಪ್ರೆಸ್‍ವೇಗಳಿಂದ ಪ್ರಯಾಣ ಅವಧಿ ಕಡಿಮೆಯಾಗುವುದರ ಜತೆಗೆ ಪ್ರಯಾಣಕ್ಕೆ ಇಂಧನವೂ ಕಡಿಮೆ ಖರ್ಚಾಗಲಿದೆ. ದಿಲ್ಲಿ-ಮುಂಬೈ ಎಕ್ಸ್‍ಪ್ರೆಸ್‍ವೇ ಪ್ರಯಾಣ ಅವಧಿಯನ್ನು 12 ಗಂಟೆಗಳಷ್ಟು ಕಡಿಮೆಗೊಳಿಸಲಿದೆ. ಮುಂಬೈಯಿಂದ-ದಿಲ್ಲಿಗೆ ಒಂದು ಟ್ರಕ್ ಈ ಹಿಂದಿನ 48 ಗಂಟೆಗಳ ಬದಲು ಎಕ್ಸ್‍ಪ್ರೆಸ್‍ವೇನಲ್ಲಿ 18 ಗಂಟೆಗಳಲ್ಲಿ ತಲುಪಲಿದೆ. ಹೀಗೆ ಹೆಚ್ಚು ಟ್ರಿಪ್ ಕೈಗೊಳ್ಳಬಹುದಾಗಿರುವುದರಿಂದ ಹೆಚ್ಚು ಲಾಭ ಕೂಡ ಗಳಿಸಬಹುದಾಗಿದೆ,'' ಎಂದು ಅವರು ಹೇಳಿದರು.
ಒಟ್ಟು 1,380 ಕಿಮೀ ಉದ್ದದ ಈ ಷಟ್ಪಥ ಎಕ್ಸ್‍ಪ್ರೆಸ್‍ವೇ ಕಾಮಗಾರಿ ಆರು ರಾಜ್ಯಗಳ ಮೂಲಕ ಹಾದು ಹೋಗಲಿದ್ದು 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.