ಚೆನ್ನೈ: ಮಾತೃಭಾಷೆಯಲ್ಲಿಯೇ ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ಪ್ರಯತ್ನವನ್ನು ತಮಿಳುನಾಡು ಅಣ್ಣಾ ಯೂನಿವರ್ಸಿಟಿ ಮಾಡಿದೆ. ತಮಿಳು ಮಾಧ್ಯಮದಲ್ಲಿಯೇ ಎರಡು ತಾಂತ್ರಿಕ ಕೋರ್ಸ್ ಪ್ರಾರಂಭಕ್ಕೆ ಅದು ಅನುಮತಿ ನೀಡಿದೆ.
ಈರೋಡ್ ನ ಸೆಂಗುಂತರ್ ಎಂಜಿನಿಯರಿಂಗ್ ಕಾಲೇಜು ಮತ್ತು ರತಿನಂ ಎಂಜಿನಿಯಂರಿಂಗ್ ಕಾಲೇಜಿನಲ್ಲಿ ಈ ಕಾರ್ಯಕ್ರಮ ಜಾರಿಗೆ ಬರುತ್ತಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ ಈ ಹಿಂದೆಯೇ ಎರಡು ಕಾಲೇಜುಗಳಿಗೆ ತಮಿಳು ಭಾಷೆಯಲ್ಲಿಯೇ ತಾಂತ್ರಿಕ ಕೋರ್ಸ್ ಶಿಕ್ಷಣ ನೀಡಲು ಅನುಮತಿ ನೀಡಿತ್ತು. ಆದರೆ ಅಣ್ಣಾ ಯೂನಿವರ್ಸಿಟಿಯಿಂದ ಅನುಮತಿ ದೊರೆತಿರಲಿಲ್ಲ.
ಸ್ಟಡಿ ಮಟೀರಿಯಲ್ ಗಳ ಕೊರತೆ ಇರುವ ಕಾರಣಕ್ಕೆ ಈ ಹಿಂದೆ ಅಣ್ಣಾ ಯೂನಿವರ್ಸಿಟಿ ಮಾತೃ ಭಾಷೆಯ ತಾಂತ್ರಿಕ ಶಿಕ್ಷಣಕ್ಕೆ ಅನುಮತಿ ನೀಡಲು ಹಿಂದೇಟು ಹಾಕಿತ್ತು.
ಅಲ್ಲದೆ ಕ್ಯಾಂಪಸ್ ಪ್ಲೇಸ್ ಮೆಂಟ್ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಹುದು ಎಂದು ಯೂನಿವರ್ಸಿಟಿ ಆತಂಕ ವ್ಯಕ್ತ ಪಡಿಸಿತ್ತು. ಕಡೆಗೂ ಎಲ್ಲಾ ಗೊಂದಲಗಳಿಗೆ ತೆರೆಯೆಳೆದು ಮಾತೃ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಅಂಕಿತ ಹಾಕಿದೆ.