ನವದೆಹಲಿ: "ಸಾಂಪ್ರದಾಯಿಕವಾಗಿ ಸೀರೆ ಧರಿಸಿದ್ದ ಕಾರಣಕ್ಕೆ ತನಗೆ ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ," ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ದೆಹಲಿಯ ಈ ರೆಸ್ಟೋರೆಂಟ್ ವಿರುದ್ದ ನೆಟ್ಟಿಗರು ಕಿಡಿಕಾರಿದ್ದಾರೆ.
ದೆಹಲಿಯ ಆಗಸ್ಟ್ ಕ್ರಾಂತಿ ಮಾರ್ಗದಲ್ಲಿ ಇರುವ ಅಕ್ವಿಲಾ ದೆಹಲಿ ರೆಸ್ಟೋರೆಂಟ್‌ನಲ್ಲಿ ಈ ಘಟನೆಯು ನಡೆದಿದೆ ಎಂದು ಹೇಳಲಾಗಿದೆ. ಅಕ್ವಿಲಾ ದೆಹಲಿ ರೆಸ್ಟೋರೆಂಟ್‌ಗೆ ಮಹಿಳೆಯೊಬ್ಬರು ಸಾಂಪ್ರದಾಯಿಕವಾಗಿ ಸೀರೆ ಧರಿಸಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ರೆಸ್ಟೋರೆಂಟ್‌ನ ಸಿಬ್ಬಂದಿಗಳು ಮಹಿಳೆ ಸೀರೆ ಧರಿಸಿದ್ದ ಕಾರಣಕ್ಕೆ ಪ್ರವೇಶವನ್ನು ನಿರಾಕರಿಸಿದ್ದಾರೆ.
ಈ ಘಟನೆಯ ವಿಡಿಯೋದ ಸಣ್ಣ ತುಣುಕು ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗುತ್ತಿದೆ. ಈ ವಿಡೀಯೋದಲ್ಲಿ ಮಹಿಳೆಯು ರೆಸ್ಟೋರೆಂಟ್‌ನ ಸಿಬ್ಬಂದಿಗಳ ಬಳಿ ಈ ರೆಸ್ಟೋರೆಂಟ್ ವಸ್ತ್ರ ಸಂಹಿತೆ (ಡ್ರೆಸ್‌ಕೋಡ್) ಬಗ್ಗೆ ಕೇಳಿದ್ದಾರೆ. ಹಾಗೆಯೇ ಈ ರೆಸ್ಟೋರೆಂಟ್ ವಸ್ತ್ರ ಸಂಹಿತೆ ಲಿಖಿತ ದಾಖಲೆಗಳನ್ನು ನೀಡುವಂತೆ ಹೇಳಿದ್ದಾರೆ.
"ಸೀರೆ ಹಾಕಿದವರಿಗೆ ಈ ರೆಸ್ಟೋರೆಂಟ್‌ನಲ್ಲಿ ಅವಕಾಶವಿಲ್ಲ ಎಂದು ಎಲ್ಲಿ ಬರೆಯಲಾಗಿದೆ. ನನಗೆ ತೋರಿಸಿ," ಎಂದು ಮಹಿಳೆಯು ಆಗ್ರಹ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿಯು "ಮೇಡಮ್ ನಾವು ಇಲ್ಲಿ ಸ್ಮಾರ್ಟ್ ಕ್ಯಾಷುವಲ್ಸ್ ಧರಿಸಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಸೀರೆಯು ಸ್ಮಾರ್ಟ್ ಕ್ಯಾಷುವಲ್ಸ್ ಅಲ್ಲ," ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅನಿತಾ ಔಧರಿ ಎಂಬ ಟ್ವಿಟ್ಟಿಗರು, "ಭಾರತೀಯ ಸೀರೆಯು ಸ್ಮಾರ್ಟ್ ಕ್ಯಾಷುವಲ್ಸ್ ಅಲ್ಲ ಎಂಬ ಕಾರಣಕ್ಕೆ ದೆಹಲಿಯ ಅಕ್ವಿಲಾ ರೆಸ್ಟೋರೆಂಟ್‌ನಲ್ಲಿ ಸೀರೆ ಉಟ್ಟವರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಹಾಗಾದರೆ ಈ ಸ್ಮಾರ್ಟ್ ಕ್ಯಾಷುವಲ್ಸ್ ಎಂದರೆ ಏನು ಎಂಬುವುದನ್ನು ಈಗ ನೀವು ನಮಗೆ ಹೇಳಬೇಕು. ದಯವಿಟ್ಟು ಸ್ಮಾರ್ಟ್ ಕ್ಯಾಷುವಲ್ಸ್ ಎಂದರೆ ಏನು ಎಂದು ಹೇಳಿ, ಬಳಿಕ ನಾನು ಸೀರೆಯನ್ನು ಉಡುವುದನ್ನು ನಿಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.
ಅನಿತಾ ಔಧರಿ ಈ ವಿಡೀಯೋವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ, ದೆಹಲಿ ಪೊಲೀಸ್, ರಾಷ್ಟ್ರೀಯ ಮಹಿಳಾ ಆಯೋಗ, ಪತ್ರಕರ್ತರನ್ನು ಟ್ಯಾಗ್ ಮಾಡಿದ್ದಾರೆ. ಹಾಗೆಯೇ #lovesaree ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.
ಈ ವಿಡಿಯೋ ಕೂಡಲೇ ವೈರಲ್ ಆಗಿದ್ದು, ನೆಟ್ಟಿಗರು ಈ ದೆಹಲಿಯ ಅಕ್ವಿಲಾ ರೆಸ್ಟೋರೆಂಟ್‌ನ ವಸ್ತ್ರ ಸಂಹಿತೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದು ವಿಚಿತ್ರವಾದುದು, ತಾರತಮ್ಯ ಮಾಡುವಂತಹ ನೀತಿ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಿಫಾಲಿ ವೈದ್ಯ ಎಂಬ ಮಹಿಳೆ, "ಸೀರೆಯು ಸ್ಮಾರ್ಟ್ ವಿಯರ್ ಅಲ್ಲ ಎಂದು ಯಾರು ನಿರ್ಧಾರ ಮಾಡಿದವರು?," ಎಂದು ಪ್ರಶ್ನೆ ಮಾಡಿದ್ದಾರೆ.
"ನಾನು ಯುಎಸ್, ಯುಎಇ, ಯುಕೆಯ ಹಲವಾರು ಉತ್ತಮ ರೆಸ್ಟೋರೆಂಟ್‌ಗಳಲ್ಲಿ ಸೀರೆಯನ್ನು ಧರಿಸಿಯೇ ಹೋಗಿದ್ದೇನೆ. ನನ್ನನ್ನು ಆ ವಿದೇಶದಲ್ಲಿಯೇ ಯಾರು ಕೂಡಾ ತಡೆದಿಲ್ಲ. ಆದರೆ ಈ ಅಕ್ವಿಲಾ ರೆಸ್ಟೋರೆಂಟ್ ಭಾರತದಲ್ಲಿ ತನ್ನದೇ ಆದ ವಸ್ತ್ರ ಸಂಹಿತೆಯನ್ನು ನಿರ್ದೇಶನ ಮಾಡುತ್ತದೆ. ಹಾಗೆಯೇ ಸೀರೆ ಸ್ಮಾರ್ಟ್ ಉಡುಗೆ ಅಲ್ಲ ಎಂದು ಅದುವೇ ನಿರ್ಧಾರ ಮಾಡಿಬಿಡುತ್ತದೆಯೇ?. ವಿಚಿತ್ರ," ಎಂದು ಕೂಡಾ ವಿದೇಶಗಳಲ್ಲೂ ಸೀರೆಯನ್ನು ಧರಿಸಿ ಓಡಾಡಿರುವ ಮಹಿಳೆ ಶಿಫಾಲಿ ವೈದ್ಯ ಟ್ವೀಟ್ ಮಾಡಿದ್ದಾರೆ.
ಇಂತಹುದ್ದೇ ಘಟನೆಯು ಕಳೆದ ವರ್ಷವೂ ವರದಿಯಾಗಿತ್ತು. ಸಂಗೀತ ಕೆ ನಾಗ್ ಎಂಬ ಗುರುಗ್ರಾಮದ ಶಾಲೆಯ ಅಧ್ಯಾಪಕಿಯನ್ನು ಸೀರೆ ಧರಿಸಿದ್ದ ಕಾರಣಕ್ಕೆ ರೆಸ್ಟೋರೆಂಟ್ ಪ್ರವೇಶವನ್ನು ನಿರಾಕರಿಸಲಾಗಿತ್ತು. ಈ ಸಂದರ್ಭದಲ್ಲಿ ಅಧ್ಯಾಪಕಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಬಳಿಕ ಆ ಮಾಲ್‌ನ ನಿರ್ದೇಶಕರು ಅಧ್ಯಾಪಕಿ ಈ ಸಂಗೀತ ಕೆ ನಾಗ್ ಬಳಿ ಕ್ಷಮೆಯನ್ನು ಕೇಳಿದ್ದರು.