ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ "ಸುಳ್ಳು ಮತ್ತು ಮಾನಹಾನಿಕರ" ಹೇಳಿಕೆ ನೀಡಿದ ಆರೋಪದ ಮೇಲೆ ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ಮುಂಬೈ ಮೂಲದ ವಕೀಲರೊಬ್ಬರು ಬುಧವಾರ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಜಾವೇದ್ ಅಖ್ತರ್ ಅವರು ಆರ್ ಎಸ್‌ಎಸ್ ವಿರುದ್ಧ ನೀಡಿದ ಹೇಳಿಕೆಗಳನ್ನು ಹಿಂಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ವಕೀಲ ಸಂತೋಷ್ ದುಬೆ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಒಂದು ವೇಳೆ ಅವರು ನೋಟಿಸ್ ಸ್ವೀಕರಿಸಿದ ಏಳು ದಿನಗಳಲ್ಲಿ "ಬೇಷರತ್ತಾಗಿ ಲಿಖಿತ ಕ್ಷಮೆ ಕೇಳಲು" ನಿರಾಕರಿಸಿದರೆ ಅಖ್ತರ್ ಅವರ ವಿರುದ್ಧ 100 ಕೋಟಿ ರೂಪಾಯಿಗಳ ಕ್ರಿಮಿನಲ್ ಮಾನನಷ್ಟವನ್ನು ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದಾರೆ.
ಜಾವೇದ್ ಅಖ್ತರ್(76) ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಆರ್ ಎಸ್ ಎಸ್ ಅನ್ನು ತಾಲಿಬಾನ್ ಗೆ ಹೋಲಿಸಿದ್ದರು. 'ತಾಲಿಬಾನಿಗಳು ಅನಾಗರಿಕರು, ಅವರ ಕೆಲಸಗಳು ಖಂಡನೀಯ, ಆದರೆ ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷದ್ ಮತ್ತು ಭಜರಂಗದಳವನ್ನು ಬೆಂಬಲಿಸುವ ಎಲ್ಲರೂ ಒಂದೇ' ಎಂದು ಹೇಳಿಕೆ ನೀಡಿದ್ದ ಸಿನಿಮಾ ಲೇಖಕ ಜಾವೇದ್ ಅಖ್ತರ್ ಅವರು ಕ್ಷಮೆ ಕೇಳಬೇಕು ಎಂದು ಹೋರಾಟ ಆರಂಭವಾಗಿದೆ.