ನವದೆಹಲಿ: 'ನ್ಯಾಯಾಲಯವು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಬಯಸುವುದಿಲ್ಲ. ಆದರೆ, ಪತ್ರಕರ್ತರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಪ್ರತ್ಯೇಕ ಮಾರ್ಗವನ್ನು ಸೃಷ್ಟಿಸಲು ಸಾಧ್ಯವಿಲ್ಲ' ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಕಳೆದ ಮೇ ತಿಂಗಳಲ್ಲಿ ಮಸೀದಿ ದ್ವಂಸಗೊಳಿಸಿದ ಸುದ್ದಿ ಪ್ರಕಟಿಸಿದಕ್ಕೆ ಸಂಬಂಧಿಸಿದಂತೆ 'ದಿ ವೈರ್' ಸುದ್ದಿ ಸಂಸ್ಥೆಯ ಮೂವರು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಪೀಠವು, 'ಅರ್ಜಿ ಸಂಬಂಧ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗುವಂತೆ ಹೇಳಿದೆ.
'ನೀವು ಎಫ್‌ಐಆರ್ ರದ್ಧತಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ. ನಾವು ನಿಮಗೆ ಮಧ್ಯಂತರ ರಕ್ಷಣೆ ನೀಡುತ್ತೇವೆ' ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಬಿ.ವಿ ನಾಗರತ್ನಾ ಅವರನ್ನೊಳಗೊಂಡ ಪೀಠವು ಹೇಳಿದೆ.
'ದಿ ವೈರ್' ಡಿಜಿಟಲ್ ನ್ಯೂಸ್ ಪೋರ್ಟಲ್ ಅನ್ನು ಪ್ರಕಟಿಸುವ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ಮತ್ತು ಅದರ ಮೂವರು ಪತ್ರಕರ್ತರಾದ ಸೆರಾಜ್ ಆಲಿ, ಮುಕುಲ್ ಸಿಂಗ್ ಚೌಹಾಣ್ ಮತ್ತು ಇಸ್ಮತ್ ಅರಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ನಡೆಸಿತು.
ಉತ್ತರ ಪ್ರದೇಶದ ರಾಂಪುರ, ಗಾಜಿಯಾಬಾದ್ ಮತ್ತು ಬಾರಬಂಕಿಯಲ್ಲಿ ತಮ್ಮ ವಿರುದ್ಧ ದಾಖಲಿಸಲಾಗಿರುವ ಮೂರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಮತ್ತು ಮೂವರು ಪತ್ರಕರ್ತರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಉತ್ತರ ಪ್ರದೇಶ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.