ಬದಿಯಡ್ಕ: ಕಾವ್ಯವೆಂಬುದು ಪುಷ್ಪಕ್ಕೆ ಸಮಾನವಾದುದು. ಕಾವ್ಯಕ್ಕೆ ಭಾವನೆ ಇಲ್ಲದಿದ್ದರೆ ಕಾವ್ಯವಾಗುವುದಿಲ್ಲ. ಸೃಜನಾತ್ಮಕ ಕಾವ್ಯ ಕಟ್ಟಲು ಭಾವನಾತ್ಮಕ ನೆಲೆಗಟ್ಟು ಬೇಕು. ಗದ್ಯ ಬುದ್ದಿಗಮ್ಯವಾದರೆ, ಕಾವ್ಯ ಹೃದಯ ಗಮ್ಯವಾದುದು. ರಸಾದ್ರ ಹೃದಯದಿಂದ ಕಾವ್ಯ ಪ್ರವೇಶಿಸಲು ಭಾವನೆಯೇ ಕಾರಣ ಎಂದು ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಅವರು ತಿಳಿಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆಯ ಸವಿ ನೆನಪಿಗೆ ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯ ಸಹಯೋಗದೊಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಶ್ರೀಮಠದಲ್ಲಿ ನಡೆದ ಕಾವ್ಯಾಂಜಲಿ ಸಾಹಿತ್ತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು, ಸಾಹಿತ್ಯ ಪ್ರಕಾರಗಳು ವಿವೇಕವನ್ನು ಜಾಗೃತಗೊಳಿಸುವ ಶಕ್ತಿಹೊಂದಿದೆ. ಪ್ರಸ್ತುತ ಕೋವಿಡ್ ಮಹಾಮಾರಿಯಿಂದ ತತ್ತರಿಸಿರುವ ಜಗತ್ತಿಗೆ ಕಾವ್ಯಶಕ್ತಿಯ ಮೂಲಕ ಬಲನೀಡುವ, ಮನಸ್ಸಿನ ಕ್ರಿಯಾತ್ಮಕತೆಗೆ ಪ್ರೇರಣೆ ನೀಡುವ ಕವಿತೆಗಳು ಮೂಡಿಬರಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್ ಮೂಡಿತ್ತಾಯ ಅವರು ಮಾತನಾಡಿ, ಕಾವ್ಯದ ಆಸ್ವಾದನೆ ರಚನೆಗಿಂತ ಮಹತ್ವದ್ದು, ಸಹೃದಯ ಕಾವ್ಯಾಸಕ್ತರಿಂದ ಕವಿತೆ ಶಕ್ತಿಪಡೆಯುತ್ತದೆ ಎಂದು ತಿಳಿಸಿದರು.
ಸಮಾರೋಪ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಸಂಚಾಲಕ, ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅವರು, ಕಾವ್ಯಗಳು ಎಂದಿಗೂ ಸಾವಿಲ್ಲದ ಶಾಶ್ವತ ಅಕ್ಷರ ರೂಪಕಗಳಾಗಿದ್ದು, ಅದು ಸದಾ ಕಾಡುತ್ತಿರಬೇಕು. ಕಾವ್ಯವು ಪರಂಪರೆಯ ನಡಿಗೆಯಾಗಿದ್ದು, ಆಯಾ ಕಾಲದ ಕನ್ನಡಿಯಾಗಿ ಭವಷ್ಯದ ಜಗತ್ತಿಗೆ ಬೆಳಕು ಚೆಲ್ಲುತ್ತದೆ ಎಂದರು.
ಈ ಸಂದರ್ಭ ನಡೆದ ಕಾವ್ಯಗೋಷ್ಠಿಯಲ್ಲಿ ಡಾ.ಯು.ಮಹೇಶ್ವರಿ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ವೆಂಕಟ್ ಭಟ್ ಎಡನೀರು, ಪ್ರಭಾವತಿ ಕೆದಿಲಾಯ ಪುಂಡೂರು, ಪದ್ಮಾವತಿ ವೈ, ಪ್ರಮೀಳಾ ಚುಳ್ಳಿಕ್ಕಾನ, ಸುಂದರ ಬಾರಡ್ಕ, ಪುರುಷೋತ್ತಮ ಭಟ್ ಕೆ ಕವಿತೆಗಳನ್ನು ವಾಚಿಸಿದರು.
ವೆಂಕಟ್ ಭಟ್ ಎಡನೀರು ಸ್ವಾಗತಿಸಿದರು. ಕಾರ್ತಿಕ್ ಪಡ್ರೆ ನಿರೂಪಿಸಿ ವಂದಿಸಿದರು.