ನವದೆಹಲಿ: ಪಂಜಾಬ್ ನಂತೆಯೇ ಕಾಂಗ್ರೆಸ್ ಆಡಳಿತ ವಿರುವ ಛತ್ತೀಸ್ ಗಢದಲ್ಲಿ ಸಿಎಂ ಬದಲಾವಣೆಯ ಊಹಾಪೋಹಗಳು ಚಾಲ್ತಿಯಲ್ಲಿರುವಾಗಲೇ, ಅಲ್ಲಿನ 12 ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಭೇಟಿ ನೀಡಿರುವುದು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಈ ಮೂಲಕ ಛತ್ತೀಸ್ ಗಢದಲ್ಲಿ ರಾಜಕೀಯ ಮೇಲಾಟ ಪ್ರಾರಂಭವಾಗಿದೆ. ರಾಜಕೀಯ ವಲಯದಲ್ಲಿ ಶಾಸಕರ ಈ ಭೇಟಿಯನ್ನು ಹಾಲಿ ಸಿಎಂ ಭೂಪೇಶ್ ಬಘೇಲ್ ಅವರನ್ನು ಬೆಂಬಲಿಸುವ ನಿರ್ಧಾರವನ್ನು ಹೈಕಮಾಂಡ್ ಗೆ ತಲುಪಿಸುವುದಕ್ಕಾಗಿ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ಶಾಸಕರು ಹೇಳುತ್ತಿರುವಂತೆ ತಾವು ದೆಹಲಿಗೆ ಬಂದಿರುವುದು ಮಾತ್ರ ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವಿಷಯದ ಬಗ್ಗೆ ಚರ್ಚಿಸುವುದಕ್ಕಾಗಿ ಆಗಿದೆ.
" ಛತ್ತೀಸ್ ಗಢದ 15-16 ಶಾಸಕರು ಬುಧವಾರ ರಾತ್ರಿ ದೆಹಲಿಗೆ ಆಗಮಿಸಿ ಬೇರೆ ಬೇರೆ ಪ್ರದೇಶಗಳಲ್ಲಿ ತಂಗಿದ್ದಾರೆ. ಶಾಸಕರು ರಾಜ್ಯ ಉಸ್ತುವಾರಿ ಪಿಎಲ್ ಪುನಿಯಾ ಅವರನ್ನು ಭೇಟಿ ಮಾಡಲಿದ್ದು, ಎಲ್ಲಾ ಶಾಸಕರಿಗೂ ಉಪಯೋಗವಾಗುವಂತೆ ಮಾಡಲು ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವೇಳಾಪಟ್ಟಿಯನ್ನು ವಿಸ್ತರಿಸಲು ಮನವಿ ಮಾಡಲಿದ್ದಾರೆ ಎಂದು ರಾಮಾನುಜ್ ಗಂಜ್ ನ ಶಾಸಕ ಬೃಹಸ್ಪತ್ ಸಿಂಗ್ ಮಾಹಿತಿ ನೀಡಿದ್ದಾರೆ.
"ಈ ವಿಷಯವನ್ನು ಮಾತನಾಡುವುದಕ್ಕಷ್ಟೇ ನಾವು ದೆಹಲಿಗೆ ಆಗಮಿಸಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
"ಶಾಸಕರು ಸಿಎಂ ನ್ನು ಬೆಂಬಲಿಸಿ ದೆಹಲಿಗೆ ಆಗಮಿಸಿದ್ದಾರೆ ಎಂಬ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು 90 ಶಾಸಕರ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 70 ಶಾಸಕರಿದ್ದಾರೆ. ಮುಖ್ಯಮಂತ್ರಿಗಳು ಚೆನ್ನಾಗಿ ಕೆಲಸ ಮಾಡುತ್ತಿರುವಾಗ, ಹೈಕಮಾಂಡ್ ಆಶೀರ್ವಾದ, ಶಾಸಕರ ಬೆಂಬಲ ಇರುವುದರಿಂದ ಸಿಎಂ ಬದಲಾವಣೆಯಾಗುವುದಿಲ್ಲ" ಎಂದು ಬೃಹಸ್ಪತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ
ರಾಜ್ಯದಲ್ಲಿ ಸಿಎಂ ಬಘೇಲ್ ಹಾಗೂ ಆರೋಗ್ಯ ಸಚಿವ ಟಿ ಎಸ್ ಸಿಂಗ್ ದೇವ್ ನಡುವೆ ಪೈಪೋಟಿ ನಡೆಯುತ್ತಿದ್ದು ಪಂಜಾಬ್ ಮಾದರಿಯಲ್ಲೇ ಇಲ್ಲೂ ಸಿಎಂ ಬದಲಾವಣೆಯಾಗುವ ಸಾಧ್ಯತೆಯನ್ನು ವಿಶ್ಲೇಷಿಸಲಾಗುತ್ತಿದೆ.
ಆದರೆ ಇದನ್ನು ಅಲ್ಲಗಳೆದಿರುವ ಬೃಹಸ್ಪತ್ ಸಿಂಗ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ, ನಮ್ಮದು ಪಂಜಾಬ್ ನಂತಹ ಪರಿಸ್ಥಿತಿ ಇಲ್ಲ" ಎಂದು ಹೇಳಿದ್ದಾರೆ.