ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಯಕ್ಷ ಗಾನಾರ್ಚನೆ ಮತ್ತು ತಾಳಮದ್ದಳೆ ಜರುಗಿತು.
ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜಾ ಕಾರ್ಯಕ್ರಮವನ್ನು ವಿಧಿವತ್ತಾಗಿ ನಂದಕಿಶೋರ ಬನಾರಿ ಅವರು ನೆರವೇರಿಸಿಕೊಟ್ಟರು. ಲತಾ ಆಚಾರ್ಯ ಬನಾರಿ ಅವರು ಲೀಲಾಮಾನುಷನಾದ ಶ್ರೀಕೃಷ್ಣ ಪರಮಾತ್ಮನ ದಿವ್ಯ ಸಂದೇಶವನ್ನು ವಿವರಿಸಿ ತಾಳಮದ್ದಳೆಯ ಪಾತ್ರ ಪರಿಚಯ ಮಾಡಿಕೊಟ್ಟರು. ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆದ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳ ಮುಮ್ಮೇಳನಗಳಲ್ಲಿ ದಯಾನಂದ ಬಂದ್ಯಡ್ಕ, ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಕಲ್ಲಡ್ಕ ಗುತ್ತು ರಾಮಯ್ಯರೈ, ಯಂ.ರಮಾನಂದ ರೈ ದೇಲಂಪಾಡಿ, ರಾಮನಾಯ್ಕ ದೇಲಂಪಾಡಿ, ವಿ.ಬಿ. ಪಂಜಾಜೆ, ಭರತ್ ಉಳ್ಳೂರು, ಬಿ.ಹೆಚ್.ವೆಂಕಪ್ಪ ಗೌಡ, ಗೋಪಾಲಕೃಷ್ಣ ರೈ ಮುದಿಯಾರು, ಶೇಖರ ಪಾಟಾಳಿ ಕಲ್ಲರ್ಪೆ ಭಾಗವಹಿಸಿದರು. ಮಮತ ಪ್ರಸಾದ್ ಬೆಳ್ಳಿಪ್ಪಾಡಿ ವಂದಿಸಿದರು.