ದೆಹಲಿ: 1947ರ ಆಗಸ್ಟ್ 15ರಂದು ಅಥವಾ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು ಎಂದು ಯಾರಾದರೂ ಹೇಳಿದರೆ ಅದು ತಪ್ಪು. ಪ್ರಜಾಪ್ರಭುತ್ವ ಎಂಬುದು ನಮ್ಮ ದೇಶದ ಮೂಲ ಸ್ವಭಾವ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ದೆಹಲಿಯ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ 51ನೇ ಸಂಸ್ಥಾಪನೆ ದಿನದಲ್ಲಿ ಮಾತನಾಡಿರುವ ಅಮಿತ್ ಶಾ ಅವರು, 'ಪ್ರಜಾಪ್ರಭುತ್ವ ನಮ್ಮ ದೇಶದ ಮೂಲ ಸ್ವಭಾವ. 1947ರ ಆಗಸ್ಟ್ 15ರ ಸ್ವಾತಂತ್ರ್ಯ ನಂತರ ಅಥವಾ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ನಂತರ ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಯಿತು ಎಂದು ಯಾರಾದರೂ ಹೇಳಿದರೆ ಅದು ತಪ್ಪು. ಪ್ರಜಾಪ್ರಭುತ್ವ ನಮ್ಮ ಮೂಲ ಸ್ವಭಾವ' ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
'ಈ ಹಿಂದೆಯೂ ಹಳ್ಳಿಗಳಲ್ಲಿ ಪಂಚ ಪರಮೇಶ್ವರರಿದ್ದರು. ಸಾವಿರಾರು ವರ್ಷಗಳ ಹಿಂದೆ ದ್ವಾರಕಾದಲ್ಲಿ ಯಾದವರ ಗಣರಾಜ್ಯವಿತ್ತು. ಬಿಹಾರದಲ್ಲಿ ಗಣರಾಜ್ಯ ವ್ಯವಸ್ಥೆ ಇತ್ತು. ಹಾಗಾಗಿ ಪ್ರಜಾಪ್ರಭುತ್ವ ಎಂಬುದು ನಮ್ಮ ರಾಷ್ಟ್ರದ ಮೂಲ ಲಕ್ಷಣವಾಗಿದೆ,' ಎಂದು ಅವರು ತಿಳಿಸಿದರು.