ನವದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸೆಪ್ಟೆಂಬರ್ 27 ರಂದು ರೈತ ಸಂಘಟನೆಗಳು ಕರೆ ನೀಡಿರುವ 'ಭಾರತ್ ಬಂದ್'ನಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ತನ್ನೆಲ್ಲ ಕಾರ್ಯಕರ್ತರು, ರಾಜ್ಯ ಘಟಕದ ಮುಖ್ಯಸ್ಥರು ಮತ್ತು ಪಕ್ಷದ ಇತರೆ ಘಟಕಗಳ ಮುಖ್ಯಸ್ಥರಿಗೆ ಭಾನುವಾರ ಕರೆ ನೀಡಿದೆ.
ರೈತರ ಪ್ರತಿಭಟನೆಯ ನೇತೃತ್ವದ ವಹಿಸಿರುವ 40ಕ್ಕೂ ಹೆಚ್ಚು ಕೃಷಿ ಸಂಘಟನೆಗಳ ಒಕ್ಕೂಟ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ ಈ ಹಿಂದೆ ಭಾರತ್ ಬಂದ್‌ನಲ್ಲಿ ಭಾಗವಹಿಸುವಂತೆ ಜನರಿಗೆ ಮನವಿ ಮಾಡಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಮಾತನಾಡಿ, ಸೋಮವಾರ ರೈತ ಸಂಘಟನೆಗಳು ಕರೆ ನೀಡಿರುವ ಶಾಂತಿಯುತ 'ಭಾರತ್ ಬಂದ್'ಗೆ ಕಾಂಗ್ರೆಸ್ ಮತ್ತು ಅದರ ಕಾರ್ಯಕರ್ತರು ತಮ್ಮ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಹೇಳಿದ್ದಾರೆ.
'ನಮ್ಮ ರೈತರ ಹಕ್ಕುಗಳಲ್ಲಿ ನಾವು ನಂಬಿಕೆಯನ್ನಿಟ್ಟಿದ್ದೇವೆ ಮತ್ತು ಕರಾಳ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಅವರಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ'. ಎಲ್ಲ ಪಿಸಿಸಿ ಅಧ್ಯಕ್ಷರು, ಇತರೆ ಘಟಕಗಳ ಮುಖ್ಯಸ್ಥರಿಗೆ ದೇಶದಾದ್ಯಂತ ಶಾಂತಿಯುತ ಭಾರತ್ ಬಂದ್‌ನಲ್ಲಿ ನಮ್ಮ ಅನ್ನದಾತರೊಂದಿಗೆ ನಿಲ್ಲಲು ವಿನಂತಿಸಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳು ಇಲ್ಲಿಯವರೆಗೆ 11 ಸುತ್ತಿನ ಮಾತುಕತೆ ನಡೆಸಿದ್ದು, ಕೊನೆಯದಾಗಿ ಜನವರಿ 22 ರಂದು ನಡೆದ ಸಭೆಯು ಮುರಿದುಬಿದ್ದಿತ್ತು. ಜನವರಿ 26 ರಂದು ಪ್ರತಿಭಟನಾ ನಿರತ ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಉಂಟಾದ ಹಿಂಸಾಚಾರದ ನಂತರ ಮಾತುಕತೆ ಪುನರಾರಂಭವಾಗಿಲ್ಲ.