ಕುಂಬಳೆ: ಅ|ಭಿವೃದ್ದಿಯಲ್ಲಿ ಹಿಂದುಳಿದಿರುವ ಮಂಜೇಶ್ವರ ತಾಲೂಕಿನ ಸಮಗ್ರ ಅಭಿವೃದ್ದಿಗೆ ಬೆಳಕು ಚೆಲ್ಲುವ ಮಾರ್ಗದರ್ಶಿಯಾಗಿ ಮಾದ್ಯಮಗಳ ಸಹಯೋಗ ಸರ್ಕಾರಕ್ಕೆ ಬೇಕಾಗುತ್ತದೆ. ಆಡಳಿತ ಮತ್ತು ಜನಸಾಮಾನ್ಯರ ಮಧ್ಯೆ ಮಾಧ್ಯಮಗಳು ನಿರ್ವಹಿಸುವ ಜವಾಬ್ದಾರಿಯುತ ವರದಿಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೈಲುಗಲ್ಲು ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದರು.
ಕುಂಬಳೆ ಪ್ರೆಸ್ ಪೋರಂನ ನವೀಕೃತ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮಾಜದ ನವೀನ ಶಿಕ್ಷಣ ತಂತ್ರಜ್ಞಾನ ಅಳವಡಿಕೆ ಮೂಲಕ ಹಿಂದುಳಿಯುವಿಕೆಯ ದೊಡ್ಡ ಸವಾಲಿಂದ ಪಾರಾಗಲು ಸಾಧ್ಯ. ಕುಂಬಳೆ ಐ.ಎಚ್.ಆರ್.ಡಿ. ಕಾಲೇಜಿನಲ್ಲಿ ಪತ್ರಿಕೋದ್ಯಮ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಚಿಂತನೆಗಳು ಸಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಪ್ರೆಸ್ ಪೋರಂ ಅಧ್ಯಕ್ಷ ಲತೀಫ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಅಪಿಸ್ ಕಿಡ್ನಿ ಸ್ಟೋನ್ ಇನ್ಸ್ಟಿಟ್ಯೂಟ್ ಮತ್ತು ಕಿಮ್ಸ್ ಸನ್ ರೈಸ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ಒದಗಿಸಲಾದ ಪ್ರಿವಿಲೇಜ್ ಕಾರ್ಡ್ ನ್ನು ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು)ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಅವರಿಗೆ ಶಾಸಕರು ಹಸ್ತಾಂತರಿಸಿ ಚಾಲನೆ ನೀಡಿದರು. ಕಾಸರಗೋಡು ಡಿವೈಎಸ್ ಪಿ.ಬಾಲಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಮಾಜ, ಕಾನೂನು ಪಾಲನೆ ಮತ್ತು ಮಾಧ್ಯಮಗಳ ಜವಾಬ್ದಾರಿಯ ಬಗ್ಗೆ ಮಾತನಾಡಿ ಶುಭಹಾರೈಸಿದರು. ಕುಂಬಳೆ ಠಾಣೆಯ ಅಧಿಕಾರಿ ಪಿ. ಪ್ರಮೋದ್, ಹಿರಿಯ ವೈದ್ಯ ಡಾ. ಮೊಹಮ್ಮದ್ ಸಲೀಂ, ಅಬುಯಾಸರ್ ಕೆಪಿ, ಕಾಸರಗೋಡು ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಕುಂಬಳೆ ಪಂಚಾಯತಿ ಉಪಾಧ್ಯಕ್ಷ ನಾಸರ್ ಮೊಗ್ರಾಲ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ ರಘುದೇವನ್ ಮಾಸ್ತರ್, ಕೆ ಎಂ ಅಬ್ಬಾಸ್ ವಾನಂದೆ, ಕೆ ರಾಮಕೃಷ್ಣನ್, ಸುಬೈರ್ ಪಡ್ಪು, ಅಹ್ಮದಲಿ ಕುಂಬಳೆ ಮಾತನಾಡಿದರು. ಮೊಹಮ್ಮದ್ ಸಲೀಮ್, ಅಪೀಸ್ ಮತ್ತು ಅಶ್ರಫ್ ಸ್ಕೈಲರ್ ಅವರಿಗೆ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅತ್ಯುತ್ತಮ ಸಮುದಾಯ ಸೇವೆಗಾಗಿ ಅಭಿನಂದಿಸಿ ಗೌರವಿಸಲಾಯಿತು. ಪ್ರೆಸ್ ಪೋರಂ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಸ್ವಾಗತಿಸಿ, ಖಜಾಂಚಿ ಅಬ್ದುಲ್ ಲತೀಫ್ ಕುಂಬಳೆ ವಂದಿಸಿದರು.