ಲಂಡನ್: "ತಾರತಮ್ಯ" ಕ್ರಮದ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ನಂತರ ಬ್ರಿಟನ್ ಸರ್ಕಾರ ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಅನುಮೋದಿತ ಲಸಿಕೆಗಳ ಪಟ್ಟಿಗೆ ಸೇರಿಸಿದೆ.
ಬ್ರಿಟನ್ ಸರ್ಕಾರ ಇಂದು ಪರಿಷ್ಕೃತ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದವರು ಬ್ರಿಟನ್ ಪ್ರವೇಶಿಸಿದ ಬಳಿಕ ಕಡ್ಡಾಯವಾಗಿ 10 ದಿನ ಕ್ವಾರಂಟೈನ್ ಗೆ ಒಳಗಾಗಬೇಕಿಲ್ಲ ಎಂದು ಹೇಳಿದೆ.
ಈ ಮುಂಚೆ ಬ್ರಿಟನ್ ಸರ್ಕಾರ ಭಾರತೀಯರು ಎರಡೂ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರೂ 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕು ಎಂಬ ನಿಯಮ ಜಾರಿಗೊಳಿಸಿತ್ತು. ಭಾರತ ಸರ್ಕಾರದ ಆಕ್ಷೇಪದ ನಂತರ ಪ್ರಯಾಣಿಕರ ನಿಯಮವನ್ನು ಸಡಿಲಗೊಳಿಸಿದೆ.
ಅಸ್ಟ್ರಾಜೆನೆಕಾ ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವಾಕ್ಸೇವ್ರಿಯಾ, ಮೊಡೆರ್ನಾ ಟಕೆಡಾ ಲಸಿಕೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬ್ರಿಟನ್‌ನ ಸಾರಿಗೆ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸಚಿವಾಲಯಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಬ್ರಿಟನ್ ಪರವಾನಗಿ ಪಡೆದ ಉತ್ಪನ್ನದ ವಿರುದ್ಧ "ತಾರತಮ್ಯ" ಕ್ರಮದ ಬಗ್ಗೆ ಸರಿಯಲ್ಲ ಎಂದಿದ್ದ ಭಾರತ, 10 ದಿನ ಕ್ವಾರಂಟೈನ್ ನಿಯಮ ಕೈಬಿಡದಿದ್ದರೆ ತಿರುಗೇಟು ನೀಡುವಂತಹ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಕೋವಿಶೀಲ್ಡ್ ಲಸಿಕೆ ಪಡೆದವರ ಬ್ರಿಟನ್ ಪ್ರಯಾಣಕ್ಕೆ ವಿಧಿಸಿರುವ ನಿರ್ಬಂಧಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರಸ್ ಅವರನ್ನು ಆಗ್ರಹಿಸಿದ್ದರು.